ಮಂಡ್ಯ :- ಕನಿಷ್ಠ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಹಾಸ್ಟೆಲ್, ವಸತಿ ಶಾಲೆ -ಕಾಲೇಜುಗಳ ಹೊರಗುತ್ತಿಗೆ ನೌಕರರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘದ ಆಶ್ರಯದಲ್ಲಿ ನೂರಾರು ನೌಕರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ರವಾನಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಅಡುಗೆ ಕೆಲಸದವರು,ಸ್ವಚ್ಛತೆ, ಕಾವಲು,ಅಟೆಂಡರ್, ಕಂಪ್ಯೂಟರ್ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್, ಹೊರಗುತ್ತಿಗೆ ಶಿಕ್ಷಕರು. ದಿನಗೂಲಿ ನೌಕರರು ಯಾವುದೇ ಭದ್ರತೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇವರ ಬೇಡಿಕೆಗಳ ಬಗ್ಗೆ ಸರ್ಕಾರ ಸ್ಪಂದಿಸುತ್ತಿಲ್ಲ ಜೊತೆಗೆ ಕರ್ತವ್ಯದ ಸಮಯದಲ್ಲಿ ಗುತ್ತಿಗೆದಾರರು,ವಾರ್ಡನ್, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಶೋಷಣೆ ಮಿತಿಮೀರಿದೆ, ಹೊರಗುತ್ತಿಗೆ ನೌಕರರ ಸಮಸ್ಯೆ ಬಗ್ಗೆ ಚರ್ಚಿಸಲು ತುರ್ತಾಗಿ ಸಭೆ ಕರೆಯುವಂತೆ ಒತ್ತಾಯಿಸಿದರು.
ಹೊರಗುತ್ತಿಗೆ ನೌಕರರಿಗೆ ಪ್ರತಿ ತಿಂಗಳು 31 ಸಾವಿರ ಕನಿಷ್ಠ ವೇತನ ನೀಡಬೇಕು, ನೇರವಾಗಿ ಇಲಾಖೆಯಿಂದ ವೇತನ ಕೊಡಬೇಕು,ನಿವೃತ್ತಿ ಯಾಗುವರೆಗೂ ಸೇವಾ ಭದ್ರತೆ ನೀಡಬೇಕು,ಕಾರ್ಮಿಕ ಕಾನೂನು ಅನ್ವಯ ಕಡ್ಡಾಯವಾಗಿ ವಾರಕ್ಕೊಂದು ರಜೆ ನೀಡಬೇಕು, ಪ್ರತಿನಿತ್ಯ ಕೆಲಸದ ಸಮಯ ನಿಗಧಿ ಮಾಡಬೇಕು,ಬೀದರ್ ಜಿಲ್ಲೆಯ ಮಾದರಿಯಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆದಾರರು ವೇತನದ ಚೀಟಿ,ನೇಮಕಾತಿ ಆದೇಶ ಪತ್ರ, ಗುರುತಿನಕಾರ್ಡ್,ಸರ್ವೀಸ್ ಸರ್ಟಿಫಿಕೇಟ್, ಇ ಎಸ್ ಐ ಮತ್ತು ಪಿಎಫ್ ಹಣ ತುಂಬಿದ ರಶೀದಿ ಕೊಡಬೇಕು, ಹಿಂದುಳಿದ ವರ್ಗ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿಗಳ ಸಂಖ್ಯೆ ಕಡಿತ ಮಾಡಿರುವ ಆದೇಶ ರದ್ದುಪಡಿಸಬೇಕು, 50 ವಿದ್ಯಾರ್ಥಿಗಳಿಗೆ ಮೂರು ಜನ ಸಿಬ್ಬಂದಿಯಂತೆ ಹಿಂದಿನ ಪದ್ಧತಿ ಮುಂದುವರಿಸಬೇಕು,ಪ್ರತಿ ತಿಂಗಳು ಐದನೇ ದಿನಾಂಕದೊಳಗೆ ವೇತನ ಪಾವತಿಸಬೇಕು ಬಾಕಿ ವೇತನ ತುರ್ತು ನೀಡಬೇಕು 10 ವರ್ಷ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದ ಅಡಿಯಲ್ಲಿ ತರಬೇಕು ಎಂದು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಕಳೆದುಕೊಂಡಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ಮರು ನೇಮಕ ಮಾಡಿಕೊಳ್ಳಬೇಕು.ಹೊಸದಾಗಿ ಪ್ರಾರಂಭ ಮಾಡುವ ಹಾಸ್ಟೆಲ್‌ಗಳಿಗೆ ಕಡ್ಡಾಯವಾಗಿ ನೇಮಕಾತಿ ಮಾಡಿಕೊಳ್ಳಬೇಕು, ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾಗಾರರಿಂದ ಶೌಚಾಲಯ ಸ್ವಚ್ಛ ಮಾಡಿಸಬಾರದು,ವಸತಿ ಶಾಲೆ ಮತ್ತು ಹಾಸ್ಟೆಲ್‌ಗಳಿಗೆ ವಾರ್ಡನ್ ಗಳು ಮಕ್ಕಳ ಅಡುಗೆಗೆ ಆಗತ್ಯವಾಗಿ ಬೇಕಾದ ಗುಣಮಟ್ಟದ ಆಹಾರ ಸಾಮಾಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ತಂದು ಕೊಡಬೇಕು,ನಿವೃತ್ತಿ ನಂತರ ಜೀವನ ನಿರ್ವಹಣೆಗೆ ವರ ಗುತ್ತಿಗೆ ನೌಕರರಿಗೆ 10 ಲಕ್ಷ ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ರಾಜ್ಯ ಕಾರ್ಯದರ್ಶಿ ಕೆ ಹನುಮೇಗೌಡ, ಜಿಲ್ಲಾಧ್ಯಕ್ಷ ನಂಜುಂಡಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ,ಚಂದ್ರಶೇಖರ, ಆಶಾ ರಾಣಿ, ಇಂದ್ರಾಣಿ, ಎಂ ಬೈರೇಗೌಡ, ಆಶಾ ಕೆ ಜಿ, ನಾಗಮ್ಮ,ಶ್ರೀಕಾಂತ್,ಸುನಂದಮ್ಮ,ತಾಯಮಣಿ ನೇತೃತ್ವ ವಹಿಸಿದ್ದರು.