ನಾಗಮಂಗಲ :- ಊರೂರು ಸುತ್ತಿ ಸಂತೆ ಜಾತ್ರೆಗಳಲ್ಲಿ ಮಕ್ಕಳ ಅಟಿಕೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ದಂಪತಿಯ ಬದುಕಿಗೆ ಕಿಡಿಗೇಡಿಗಳು ಕೊಳ್ಳಿ ಇಟ್ಟಿರುವ ಘಟನೆ ಕೆಂಬಾರೆ ಗ್ರಾಮದಲ್ಲಿ ನಡೆದಿದೆ.
ವ್ಯಾಪಾರಕ್ಕೆ ಆಶ್ರಯವಾಗಿದ್ದ ಗೂಡ್ಸ್ ಆಟೋಗೆ ಬೆಂಕಿ ಹಚ್ಚಲಾಗಿದ್ದು, ಆಟೋ ಮತ್ತು ಅದರಲ್ಲಿದ್ದ ಮಕ್ಕಳ ಆಟಕ್ಕೆ ಸಾಮಾನುಗಳು ಸಂಪೂರ್ಣ ಭಸ್ಮಗೊಂಡಿವೆ.
ಗೀತಾ- ಮಹೇಶ್ ದಂಪತಿ ಮಕ್ಕಳ ಆಟಿಕೆ ಸಾಮಾನುಗಳನ್ನು ಮಾರಾಟ ಮಾಡುತ್ತಿದ್ದು, ಇದಕ್ಕಾಗಿ ಗೂಡ್ಸ್ ಆಟೋ ಖರೀದಿ ಮಾಡಿದ್ದರು, ಅದರಲ್ಲಿ ಊರೂರು ಸುತ್ತುತ್ತಾ ಸಂತೆ ಜಾತ್ರೆಗಳಲ್ಲಿ ವ್ಯಾಪಾರ ಮಾಡುತ್ತಾ ಸ್ವಾವಲಂಬಿ ಜೀವನ ಮಾಡುತ್ತಿದ್ದರು.
ವ್ಯಾಪಾರ ಮುಗಿಸಿಕೊಂಡು ತಮ್ಮ ಮನೆ ಮುಂದೆ ಗೂಡ್ಸ್ ಆಟೋ ನಿಲ್ಲಿಸಿದ್ದರು ತಡರಾತ್ರಿ ಕಿಡಿಗೇಡಿಗಳು ಆಟೋಗೆ ಬೆಂಕಿ ಹಚ್ಚಿದ್ದು ಇದರಿಂದ ಸಾಮಗ್ರಿಗಳ ಜೊತೆಗೆ ಆಟೋ ಕೂಡ ಭಸ್ಮವಾಗಿದೆ. ಅಂದಾಜು 7 ಲಕ್ಷಕ್ಕೂ ಹೆಚ್ಚು ನಷ್ಟವಾಗಿದ್ದು ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಗೀತಾ ಮತ್ತು ಮಹೇಶ್ ಮಾತನಾಡಿ, ಮಕ್ಕಳ ಆಟದ ಸಾಮಗ್ರಿಗಳನ್ನು ವ್ಯಾಪಾರ ಮಾಡಲು ಸಾಲ ಮಾಡಿ ಅಶೋಕ ಲೈಲ್ಯಾಂಡ್ ಗೂಡ್ಸ್ ಆಟೋ ಖರೀದಿಸಿದ್ದೆವು ಪ್ರತಿನಿತ್ಯ ಸಂತೆ ಜಾತ್ರೆಗಳಿಗೆ ತೆರಲಿ ವ್ಯಾಪಾರ ಮಾಡುತ್ತಿದ್ದೆವು, ನಿನ್ನೆ ಸಹ ವ್ಯಾಪಾರಕ್ಕೆ ಹೋಗಿ ಬಂದಿದ್ದೆವು ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ, ಇದರಿಂದ ನಮ್ಮ ಬದುಕು ಬೀದಿಗೆ ಬಿದ್ದಂತಾಗಿದೆ ಎಂದು ಅಳಲು ತೋಡಿ ಕೊಂಡರು.