ಶ್ರೀರಂಗಪಟ್ಟಣ :- ಕೃಷ್ಣರಾಜಸಾಗರ ವ್ಯಾಪ್ತಿಯ ವಿಶ್ವೇಶ್ವರಯ್ಯ ನಾಲೆಯಲ್ಲಿ ದುರಂತದ ಸರಮಾಲೆ ಮುಂದುವರೆದಿದ್ದು,ನಾಲೆಯೊಳಗೆ ನೀರಿನಲ್ಲಿ ಮುಳುಗಿದ್ದ ಕಾರಿನಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ.
ಕೆ.ಆರ್.ಎಸ್. ಅಣೆಕಟ್ಟೆಯ ನಾರ್ತ್ ಬ್ಯಾಂಕ್ ಗ್ರಾಮದ ಸಮೀಪ ವಿಶ್ವೇಶ್ವರಯ್ಯ ನಾಲೆಯೊಳಗೆ ತಂದೆ ಮತ್ತು ಇಬ್ಬರ ಮಕ್ಕಳ ಶವಗಳು ಪತ್ತೆಯಾಗಿವೆ.
ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕು ಹೆಬ್ಬಾಳು ಗ್ರಾಮದ ಕುಮಾರಸ್ವಾಮಿ (38), ಮಕ್ಕಳಾದ ಅದ್ಯೆತ್ (8) ಮತ್ತು ಅಕ್ಷತಾ (3) ಕಾರಿನ ಸಮೇತ ನಾಲೆಯಲ್ಲಿ ಮುಳುಗಿದ್ದಾರೆ.
ಇಬ್ಬರು ಮಕ್ಕಳ ಜೊತೆ ಕುಮಾರಸ್ವಾಮಿ ಏ. 16 ರಂದು ಮಕ್ಕಳ ಜತೆ ಸ್ಯಾಂಟ್ರೋ ಕಾರಿನಲ್ಲಿ ಬೆಂಗಳೂರಿನಿಂದ ಕೆ. ಆರ್. ನಗರಕ್ಕೆ ಹೊರಟಿದ್ದರು. ಆದರೆ ಅವರು ಮನೆ ತಲುಪಿರಲಿಲ್ಲ ಇದಕ್ಕೂ ಮುನ್ನ ಮೊಬೈಲ್ ಕರೆ ಮಾಡಿದ್ದ ಅವರು ಕೆ ಆರ್ ಎಸ್ ನಲ್ಲಿ ಇದ್ದೇನೆ ಎಂದು ಹೇಳಿದ್ದರು ಅನಂತರ ಅವರ ಸುಳಿವು ಸಿಕ್ಕಿರಲಿಲ್ಲ.
ಮನೆಯವರು ಕೆ ಆರ್ ಸಾಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು, ಕೃಷ್ಣರಾಜಸಾಗರದ ನಾರ್ತ್ ಬ್ಯಾಂಕ್ ಬಳಿ ಮಂಗಳವಾರ ಬೆಳಿಗ್ಗೆ ನಾಲೆಯಲ್ಲಿ ಕಾರು ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದು, ನಾಲೆಗೆ ಇಳಿದು ಪರಿಶೀಲಿಸಿದಾಗ ಮೃತ ದೇಹಗಳು ಇರುವುದು ಕಂಡು ಬಂದಿದೆ. ಕಾರು ಮತ್ತು ಮೃತದೇಹಗಳನ್ನು ಮೇಲೆ ಎತ್ತಲಾಗಿದೆ. ಕಾರು ನಾಲೆಗೆ ಉರುಳಲು ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಹೇಳಲಾಗುತ್ತಿದ್ದರೂ ಕಾರು ಸಮೇತ ನಾಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೆ.ಆರ್.ಎಸ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿ ಸಿ ನಾಲೆ ನೀರಿನಲ್ಲಿ ಮುಳುಗಿದ್ದ ಕಾರಿನಲ್ಲಿ ತಂದೆ, ಇಬ್ಬರು ಮಕ್ಕಳ ಶವ ಪತ್ತೆ
133

