ಮಂಡ್ಯ: ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿಯಲ್ಲಿ ಆಶಾಕಾರ್ಯಕರ್ತೆ ಆಯ್ಕೆ ಸಂಬಂಧ ನಡೆದ ವಿಶೇಷ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಅಹವಾಲು ಸ್ವೀಕರಿಸದೆ ಆಯ್ಕೆ ಪ್ರಕ್ರಿಯೆ ನಡೆದು ನೆರೆದವರು ಪೆಚ್ಚಾಗಿ ಮನೆಗೆ ತೆರಳಿದ ಘಟನೆ ಜರುಗಿದೆ.
ಬುಧವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸ ಬೂದನೂರು 2 ಹಾಗೂ 3ನೇ ವಾರ್ಡಿನ ಆಶಾಕಾರ್ಯಕರ್ತೆ ಆಯ್ಕೆಗೆ ಒಂದು ದಿನ ಮುಂಚಿತವಾಗಿ ಕರಪತ್ರ ವಿತರಿಸಿ, ಟಾಂ ಟಾಂ ಮಾಡಿ ಸಭೆ ಆಯೋಜಿಸಲಾಗಿತ್ತು.
ಮೈತ್ರಾ, ಪದ್ಮಾವತಿ ಹಾಗೂ ರಮ್ಯಾ ಎಂಬ ಮೂವರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಮೇರೆಗೆ ಗ್ರಾಮಸಭೆ ಅರಂಭವಾಯಿತು. ಪದ್ಮಾವತಿ ಎಂಬುವವರು ತಾವು ಜಿಪಂ ಸಿಇಒಗೆ ಮನವಿ ಸಲ್ಲಿಸಿದ್ದು, ಸದರಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದು ಸಣ್ಣ ಪುಟ್ಟ ಕಾರಣದಿಂದ ನಿಯಮಬಾಹಿರವಾಗಿ ಕೆಲಸದಿಂದ ತೆಗೆಯಲಾಗಿದೆ. ಜಿಪಂ ಸಿಇಒ ಅವರ ಆದೇಶದಂತೆ ನನ್ನ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಕೇಳಿ ಎಂದರು. ಅದಕ್ಕೆ ಸಭೆ ಸೊಪ್ಪು ಹಾಕಲಿಲ್ಲ. ಬಳಿಕ ಹೊಸ ಆಯ್ಕೆ ಪ್ರಕ್ರಿಯೆಗೆ ಮುಂದಾದಾಗ ಅದಕ್ಕೂ ಯಾವುದೇ ಮಾನದಂಡದ ಬಗ್ಗೆ ಅಧಿಕಾರಿಗಳು ಮುಂದಾಗದೆ ಅರ್ಜಿ ಸಲ್ಲಿಸಿರುವ ಮೈತ್ರಾ ಎಂಬುವವರಿಗೆ 4 ಅಂಕ, ರಮ್ಯಾ ಅವರಿಗೆ 3 ಪದ್ಮಾವತಿಗೆ 2 ಅಂಕವನ್ನು ವೈದ್ಯರು ನೀಡಿದ್ದು 4 ಅಂಕ ಪಡೆದಿರುವ ಅಭ್ಯರ್ಥಿ ಆಯ್ಕೆಯಾಗಿದೆ ಎಂದು ಘೋಷಿಸಿದರು.
ಈ ವೇಳೆ ಸ್ವಂತ ಮನೆ ನಮ್ಮಹಕ್ಕು ಹೋರಾಟ ಸಮಿತಿ ಸಂಚಾಲಕ ಸತೀಶ್ ಬೂಸ ಮಾತನಾಡಿ, ಗ್ರಾಮಸಭೆ ಅಭಿಪ್ರಾಯ ಹಾಗೂ ಮತ ಪಡೆಯದೇ ಅಕ್ರಮವಾಗಿ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಪಿಡಿಒ ಹರೀಶ್, ನೋಡೆಲ್ ಅಧಿಕಾರಿಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ ಪ್ರಭಾವ ಹಾಗೂ ಆಮಿಷಕ್ಕೆ ಒಳಗಾಗಿ ನಿಯಮ ಬಾಹಿರ ಆಯ್ಕೆ ಪ್ರಕ್ರಿಯೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಕೆ.ಕುಮಾರಸ್ವಾಮಿ ಪ್ರತಿಕ್ರಿಯಿಸಿ ಆಶಾಕಾರ್ಯಕರ್ತೆ ಆಯ್ಕೆ ಸಭೆ ಕುರಿತು ಮಾಹಿತಿ ನೀಡದೆ ನನಗೆ ಸಾಮಾನ್ಯ ಆಹ್ವಾನ ನೀಡಲಾಗಿತ್ತು. ಇದರಿಂದಾಗಿ ನಾನು ಗೊಂದಲಕ್ಕೆ ಒಳಗಾಗಿದ್ದು ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಬೂದನೂರು ಗ್ರಾಪಂನಲ್ಲಿ ಗ್ರಾಮಸ್ಥರ ಅಹವಾಲು ಆಲಿಸದೆ ಆಶಾ ಕಾರ್ಯಕರ್ತೆ ಆಯ್ಕೆ
75

