ಪಾಂಡವಪುರ :- ಬಡವರು ಯಾವುದೇ ಕಾರಣಕ್ಕೂ ಹಸಿವಿನಲ್ಲಿ ನೋವು ಅನುಭವಿಸಬಾರದು. ಬಡವರ ಹೊಟ್ಟೆ ತುಂಬಿದರೆ ಅವರಿಗೆ ಕೆಲಸ ಮಾಡಲು ಶಕ್ತಿ ದೊರೆಯುತ್ತದೆ ಎಂಬ ಕಾರಣಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ ತಿಳಿಸಿದರು.
ಪಾಂಡವಪುರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ನ್ಯಾಯಬೆಲೆ ಅಂಗಡಿಗಳು ಬಡವರಿಗೆ ಪಡಿತರ ನೀಡುವ ಸ್ಥಳ ಸರಿಯಾದ ತೂಕ ಹಾಗೂ ಗುಣಮಟ್ಟದ ಪಡಿತರ ಬಡವರಿಗೆ ದೊರಕಬೇಕು. ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಯಾವುದೇ ಕಾರಣಕ್ಕೂ ಬಡವರು ಸರ್ಕಾರದ ಯೋಜನೆಯಿಂದ ವಂಚನೆಯಾಗಬಾರದು ಎಂದರು.
ನ್ಯಾಯಬೆಲೆ ಅಂಗಡಿ ಅವರಿಗೆ ಪಡಿತರ ವಿತರಣೆಗೆ ಕಮಿಷನ್ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ ಪಡಿತರ ಕಾರ್ಡುದಾರರಿಗೆ ಹಣ ವಸೂಲಿ ಮಾಡುವುದು ಕಾನೂನು ಬಾಹಿರ .ಈ ಬಗ್ಗೆ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆ ನಡೆಸಿ ನಿರ್ದೇಶನ ನೀಡಿ ಎಂದರು.
ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು 80 ವರ್ಷ ಮೇಲ್ಪಟ್ಟವರಿದ್ದಲ್ಲಿ ಅವರಿಗೆ ಮನೆಗೆ ಪಡಿತರ ತಲುಪಿಸಲು ಅವಕಾಶವಿರುತ್ತದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಹಿತಿ ನೀಡಿ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಎಂದರು.
ಜಿಲ್ಲೆಯಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ 1422 ಫಲಾನುಭವಿಗಳು ಐ.ಟಿ,ಜಿ.ಎಸ್.ಟಿ ಪಾವತಿದಾರರು ಎಂದು ಗೃಹ ಲಕ್ಷಿ ಹಣ ಸ್ಥಗಿತಗೊಳಿಸಲಾಗಿದೆ. ಇದನ್ನು ಸರಿಪಡಿಸಿದರೆ ಶೇ 100 ರಷ್ಟು ಸಾಧನೆಯಾಗುತ್ತದೆ. ಜಿಲ್ಲೆಯಲ್ಲಿ 1422 ಮಹಿಳೆಯರು ಜಿ.ಎಸ್.ಟಿ ಅಥವಾ ಐ.ಟಿ ಪಾವತಿದಾರರಲ್ಲ ಎಂದು ದೃಢೀಕರಣ ನೀಡಿದರೆ ರಾಜ್ಯ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ಫಲಾನುಭವಿಗಳಿಗೆ ತೊಂದರೆಯಿದ್ದಲ್ಲಿ ಚರ್ಚಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಭೆ ನಡೆಸುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಯುವಶಕ್ತಿ ದೇಶದ ಅಭಿವೃದ್ಧಿಯ ಶಕ್ತಿ. ಯುವನಿಧಿ ಯೋಜನೆಯ ಬಗ್ಗೆ ಹೆಚ್ಚು ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಿ. ಅರ್ಹರನ್ನು ಯುವನಿಧಿ ಯೋಜನೆಗೆ ನೊಂದಣಿ ಮಾಡಿಕೊಳ್ಳಿ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ರುದ್ರಪ್ಪ ಮಾತನಾಡಿ ಸರಿಯಾದ ಸಮಯಕ್ಕೆ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ತಲುಪಿಸಬೇಕು ಇಲ್ಲಾವಾದಲ್ಲಿ ಬಡವರಿಗೆ ತೊಂದರೆಯಾಗುತ್ತದೆ ಹಾಗೂ ಬ್ಯಾಂಕ್ ನಲ್ಲಿ ಖಾತೆ ತೆರೆಯುವ ಸಂದರ್ಭದಲ್ಲಿ ಹಾಗೂ ಸಾಲ ಪಡೆಯುವ ಸಂದರ್ಭದಲ್ಲಿ ಪ್ಯಾನ್ ಕಾಡ್೯ ಪಡೆದು ಆಧಾರ್ ನೊಂದಿಗೆ ಲಿಂಕ್ ಮಾಡಲಾಗುತ್ತದೆ. ಇದರಿಂದ ಅವರು ಐ.ಟಿ ಪಾವತಿದಾರರು ಎಂದು ಬಿಂಬಿಸುತ್ತಿದೆ ಎಂದರು.
ಇದಕ್ಕೆ ಜಿಲ್ಲಾಧಿಕಾರಿ ಡಾ: ಕುಮಾರ ಪ್ರತಿಕ್ರಿಯಿಸಿ ಸದರಿ ಮಾಹೆಯಲ್ಲಿ ಅಕ್ಕಿಯ ಜೊತೆ ರಾಗಿ ಸಹ ನೀಡಲಾಗುತ್ತಿದೆ. ಇನ್ನೂ ಎರಡು ದಿನದೊಳಗಾಗಿ ಪಡಿತರ ವಿತರಿಸಲಾಗುವುದು ಬ್ಯಾಂಕ್ ನಲ್ಲಿ ಖಾತೆ ತೆರೆಯುವ ಸಂದರ್ಭದಲ್ಲಿ ಪ್ಯಾನ್ ಸಂಖ್ಯೆ ಬೇಕಿರುವುದಿಲ್ಲ. ಈ ಬಗ್ಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಂದ ಚರ್ಚಿಸಿ ನಿರ್ದೇಶನ ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಮಾತನಾಡಿ 1422 ಮಹಿಳೆಯರ ಮಾಹಿತಿಯನ್ನು ಸಂಗ್ರಹಿಸಿ ಅವರ ಪ್ಯಾನ್ ಹಾಗೂ ಆಧಾರ್ ಸಂಖ್ಯೆ ಪಡೆದು ಜಿ.ಎಸ್.ಟಿ ಹಾಗೂ ಆದಾಯ ತೆರಿಗೆ ಕಚೇರಿಯಿಂದ ಸದರಿ ಮಹಿಳೆಯರು ಜಿ.ಎಸ್.ಟಿ ಹಾಗೂ ಐ.ಟಿ ಪಾವತಿಸುತ್ತಿಲ್ಲ ಎಂದು ದೃಢೀಕರಣ ಪಡೆಯಲಾಗಿದೆ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಧನುಷ್, ಪಾಂಡವಪುರ ತಾಲ್ಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಹೆಚ್.ಕೆ.ಕೃಷ್ಣೇಗೌಡ ಉಪಸ್ಥಿತರಿದ್ದರು.
ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರಕ್ಕೆ ಹಣ ವಸೂಲಿ ಕಾನೂನು ಬಾಹಿರ
Recent Comments
on Hello world!
