ಮಂಡ್ಯ :- ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರ ಮಂಡ್ಯದ ಶಾಲಾ – ಕಾಲೇಜುಗಳಿಗೆ ತೆರಳಲು ಸಮರ್ಪಕ ಸರ್ಕಾರಿ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಎಬಿವಿಪಿ ನೇತೃತ್ವದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸದ ಕೆಎಸ್ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ನಗರದ ಶಾಲಾ,ಕಾಲೇಜುಗಳಲ್ಲಿ ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪ್ರಯಾಣಕ್ಕೆ ಸರ್ಕಾರಿ ಬಸ್ ಅವಲಂಬಿಸಿದ್ದಾರೆ ಆದರೆ ನಿಗದಿತ ಸಮಯಕ್ಕೆ ಕೆಎಸ್ಆರ್‌ಟಿಸಿ ಬಸ್ ಗಳು ಸಂಚಾರ ಮಾಡುತ್ತಿಲ್ಲ ಅಲ್ಲದೆ ಸಂಚಾರ ಮಾಡುವ ಬಸ್ ಗಳು ನಿಗದಿತ ಸ್ಥಳದಲ್ಲಿ ನಿಲುಗಡೆ ಮಾಡುತ್ತಿಲ್ಲ ಇದರಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿ ಕಾರಿದರು.
ಸ್ಥಳೀಯ ಬಸ್ ಗಳ ಕೊರತೆ ಇರುವುದರಿಂದ ಹಲವು ಮಾರ್ಗಗಳಲ್ಲಿ ನಿರಂತರ ಬಸ್ ಸೇವೆ ಇಲ್ಲವಾಗಿದೆ,ನಿಗದಿತ ವೇಳಾಪಟ್ಟಿ ಪಾಲನೆ ಮಾಡದಿರುವುದರಿಂದ ಬಸ್ ಗಳು ನಿಗದಿತ ಸಮಯದಲ್ಲಿ ಸಂಚಾರ ಮಾಡುತ್ತಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ಹೊಸ ಬಸ್ ಗಳ ಸಂಚಾರ ಆರಂಭ ಮಾಡದಿರುವುದು ಹಾಗೂ ಬಸ್ ಗಳ ಸ್ವಚ್ಛತೆ,ನಿರ್ವಹಣೆ ಕೊರತೆಯಿಂದ ಪ್ರಯಾಣಿಕರಿಗೆ ತೊಂದರೆ ಎದುರಾಗಿದೆ ಎಂದು ಹೇಳಿದರು.
ಸ್ಥಳೀಯ ಬಸ್ ಗಳ ಸಂಖ್ಯೆ ಹೆಚ್ಚಿಸಿ ಹೆಚ್ಚಿನ ಮಾರ್ಗದಲ್ಲಿ ಸಂಚರಿಸಲು ಕ್ರಮ ಕೈಗೊಳ್ಳಬೇಕು, ಬಸ್ ಸಂಚಾರದ ಬಗ್ಗೆ ಪ್ರತಿ ನಿಲ್ದಾಣದಲ್ಲಿ ವೇಳಾಪಟ್ಟಿ ಪ್ರಕಟಿಸಿ ನಿಗದಿತ ಸಮಯದಲ್ಲಿ ಸಂಚರಿಸಲು ಸೂಚನೆ ನೀಡಬೇಕು, ಜನಸಂಖ್ಯೆಗೆ ಅನುಗುಣವಾಗಿ ಬಸ್ ಸೌಲಭ್ಯ ಕಲ್ಪಿಸುವುದರ ಜೊತೆಗೆ ಹೊಸ ಬಸ್ ಮಾರ್ಗಗಳನ್ನು ಪರಿಚಯಿಸಬೇಕು,ಬಸ್‌ಗಳ ನಿರ್ವಹಣೆ ಹಾಗೂ ಸ್ವಚ್ಛತೆಗೆ ವಿಶೇಷ ಗಮನ ಹರಿಸಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.
ಎಬಿವಿಪಿ ನಗರ ಕಾರ್ಯದರ್ಶಿ ಹರ್ಷ, ರಾಜ್ಯ ಸಹ ಕಾರ್ಯದರ್ಶಿ ಪ್ರಜ್ವಲ್ ಹೆಚ್.ಬಿ ಗುರುಪ್ರಸಾದ್ ನೇತೃತ್ವ ವಹಿಸಿದ್ದರು.
ಮಂಡ್ಯ l ಸಮರ್ಪಕ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
Recent Comments
on Hello world!
