ಮಂಡ್ಯ :- ಪರವಾನಗಿ ಭೂ ಮಾಪಕರ ಅನಿರ್ದಿಷ್ಟಾವಧಿ ಮುಷ್ಕರದಿಂದ ರೈತರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಗಳ ಒಕ್ಕೂಟ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ರಾಜ್ಯದ ಎಲ್ಲೆಡೆ ಪರವಾನಗಿ ಭೂಮಾಪಕರು ಮುಷ್ಕರ ನಡೆಸುತ್ತಿದ್ದು ಇದರಿಂದ ಜಮೀನು ಅಳತೆ ಸಂಪೂರ್ಣವಾಗಿ ಸ್ಥಗಿತಗೊಂಡು ಸಾರ್ವಜನಿಕರಿಗೆ ಅದರಲ್ಲೂ ರೈತರಿಗೆ ತೊಂದರೆಯಾಗಿದೆ,ರೈತರು ಜಮೀನುಗಳ ಹದ್ದುಬಸ್ತು, ದುರಸ್ತಿ, ಪೋಡಿ ಹಾಗೂ ಇ ನಕ್ಷೆಗಳಿಗಾಗಿ ಈಗಾಗಲೇ ಸರ್ಕಾರಕ್ಕೆ ನಿಗಧಿತ ಶುಲ್ಕವನ್ನು ಪಾವತಿಸಿದ್ದಾರೆ. ಆದರೆ ಭೂ ಮಾಪಕರ ಲಭ್ಯತೆ ಇಲ್ಲದೆ ರೈತರು ಅಲೆದಾಡುವಂತಾಗಿದೆ. ಕೃಷಿ ಸಾಲ ಪಡೆಯಲು ಇ ನಕ್ಷೆ ಕಡ್ಡಾಯವಾಗಿದ್ದು ಇದು ದೊರಕದೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.
ಸರ್ಕಾರ ಮಧ್ಯ ಪ್ರವೇಶಿಸಿ ಸಂಬಂಧಿಸಿದ ಸಚಿವರುಗಳ ಜೊತೆ ಚರ್ಚಿಸಿ ಭೂ ಮಾಪಕರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಿ ಮುಷ್ಕರ ಅಂತ್ಯಗೊಳಿಸುವ ಮೂಲಕ ರೈತರಿಗೆ ಬಾಕಿ ಉಳಿದಿರುವ ಅಳತೆ ಕೆಲಸ ಸಮರ್ಪಕವಾಗಿ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಕರವೇ ಸಂಘಟನೆಗಳ ಒಕ್ಕೂಟ ರಾಜ್ಯ ಕಾರ್ಯಾಧ್ಯಕ್ಷ ಎಚ್ ಕೆ ಸೋಮಶೇಖರ್, ಜಿಲ್ಲಾಧ್ಯಕ್ಷ ಎಸ್ ಡಿ ಮಹದೇವ್, ತಾಲೂಕು ಅಧ್ಯಕ್ಷ ಮಂಜುನಾಥ್, ರಾಜ್ಯ ಉಪಾಧ್ಯಕ್ಷ ಕೆ ಪಿ ಇಂದ್ರ ಕುಮಾರ್, ಪರಮೇಶ್, ರೇವಣ್ಣ , ಜಯರಾಮು, ಪ್ರದೀಪ್, ಶಿವಲಿಂಗೇಗೌಡ, ನರಸಪ್ಪಗೌಡ, ಶಿವರಾಜು ನೇತೃತ್ವ ವಹಿಸಿದ್ದರು.
ಭೂಮಾಪಕರ ಮುಷ್ಕರ ಅಂತ್ಯಕ್ಕೆ ಸರ್ಕಾರ ಮಧ್ಯಪ್ರವೇಶಿಸಲಿ
236

