ಮಂಡ್ಯ :- ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರವರ ಅಭಿಮಾನೋತ್ಸವವನ್ನು ಅಣಕಿಸಿ ಅವಮಾನ ಮಾಡಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ಮಂಡ್ಯದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಪ್ರತಿಭಟಿಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಹೋಟೆಲ್ ನಾಗರಾಜ್ ಭಾವಚಿತ್ರ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆ ಒಡನಾಟ ಹೊಂದಿರುವ ವಾಟಾಳ್ ನಾಗರಾಜ್ ಬಿಜೆಪಿ ಪಕ್ಷದ ಕಾರ್ಯ ಚಟುವಟಿಕೆ ಬಗ್ಗೆ ವಿನಾಕಾರಣ ಅಪಸ್ವರ ಎತ್ತಿ ಪಶ್ಚಿಮ ಬಂಗಾಳದಲ್ಲಿ ನಡೆದ ಎಸ್ಐಆರ್ ವಿರೋಧಿಸಿ ಮಮತಾ ಬ್ಯಾನರ್ಜಿ ಪರ ಬ್ಯಾಟಿಂಗ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋಮುವಾದಿ, ಮೂಲಭೂತವಾದಿ ಎಂದು ಟೀಕಿಸಿರುವ ಇವರು ಚಿತ್ರದುರ್ಗದಲ್ಲಿ ನಡೆದ ಬಿಎಸ್ ಯಡಿಯೂರಪ್ಪ ರವರ ಅಭಿಮಾನೋತ್ಸವವನ್ನು ಅಣಕಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಅಭಿಮಾನಿಗಳು, ನೂರಾರು ಮಠಾಧೀಶರು ಹಾಗೂ ರಾಜಕೀಯ ನಾಯಕರು ಅಭಿಮಾನೋತ್ಸವದಲ್ಲಿ ಭಾಗಿಯಾಗಿ ಶುಭ ಹಾರೈಸಿದ್ದಾರೆ ಆದರೆ ಬಿ ಎಸ್ ಯಡಿಯೂರಪ್ಪರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅಭಿಮಾನೋತ್ಸವವನ್ನು ಅಣಕಿಸಿರುವುದು ಮಠಾಧೀಶರು ಮತ್ತು ಯಡಿಯೂರಪ್ಪ ಅಭಿಮಾನಿಗಳಿಗೆ ಮಾಡಿದ ಅವಮಾನವಾಗಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ನಡೆಸಿರುವ ಹೋರಾಟ ಎಲ್ಲರಿಗೂ ಮಾದರಿಯಾಗಿದೆ, ಬಗರ್ ಹುಕುಂ, ಜೀತ ವಿಮುಕ್ತಿ, ರೈತಪರ ಹೋರಾಟ ಅಷ್ಟೇ ಅಲ್ಲದೆ ಮುಖ್ಯಮಂತ್ರಿ ಆಗಿದ್ದಾಗ ಅವರು ಜಾರಿಗೊಳಿಸಿದ ಜನಪರ ಯೋಜನೆ ಜೊತೆಗೆ ಅಖಂಡ ಕರ್ನಾಟಕದ ಅಭಿವೃದ್ಧಿಗೆ ಶ್ರಮ ವಹಿಸಿದ್ದಾರೆ, ಇಂತಹ ಜನಪರ ನಾಯಕನ ಮೇಲೆ ಈಗಲೂ ಜನತೆ ಅಭಿಮಾನ ಇಟ್ಟಿರುವುದಕ್ಕೆ ಅಭಿಮಾನೋತ್ಸವವೇ ಸಾಕ್ಷಿಯಾಗಿದೆ,
ಪ್ರಧಾನಿ ನರೇಂದ್ರ ಮೋದಿ ರನ್ನ ಕೋಮುವಾದಿ ಮೂಲಭೂತವಾದಿ ಎಂದು ಟೀಕಿಸುವ ಇವರು ಶ್ರೀರಂಗಪಟ್ಟಣಕ್ಕೆ ತೆರಳಿ ಟಿಪ್ಪು ಸುಲ್ತಾನ್ ಸಮಾಧಿಗೆ ಗೌರವ ಸಲ್ಲಿಸುತ್ತಾರೆ, ಟಿಪ್ಪು ಏನು ಮಾನವತಾವಾದಿನಾ, ನಾಲಿಗೆ ಹಿಡಿತದಲ್ಲಿಟ್ಟು ಮಾತನಾಡಲಿ,ರಾಜಕಾರಣ ಮಾಡುವುದಾದರೆ ರಾಜಕೀಯ ಮಾಡಲಿ ಸಿದ್ದರಾಮಯ್ಯ ಪರ ವಕಾಲತ್ತು ವಹಿಸುವ ವಾಟಾಳ್ ರನ್ನ ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಮುಖ್ಯಮಂತ್ರಿ ನೇಮಿಸಿಕೊಳ್ಳಲಿ, ಯಡಿಯೂರಪ್ಪ ರವರ ಅಭಿಮಾನೋತ್ಸವವನ್ನು ಅಣಕಿಸಿರುವ ವಾಟಾಳ್ ನಾಗರಾಜ್ ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರನ್ನು ಟೀಕೆ ಮಾಡುವ ವಾಟಾಳ್ ನಾಗರಾಜ್ ಮುಖ್ಯಮಂತ್ರಿ ಸಿದ್ದರಾಮಯ್ಯರ ಬೂಟು ನೆಕ್ಕುವ ಕೆಲಸ ಮಾಡುತ್ತಿದ್ದಾರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಅಭಿಮಾನಿಗಳನ್ನು ಕೆಣಕಬೇಡಿ, ರಾಜ್ಯದ ಜನರ ಕ್ಷಮೆಯಾಚಿಸದೆ ಮಂಡ್ಯ ಜಿಲ್ಲೆಗೆ ಬೇಟಿ ನೀಡುವಿರಾ ಎಂದು ಸವಾಲು ಹಾಕಿದರು.
ಪಕ್ಷದ ಮುಖಂಡರಾದ ವಿವೇಕ್,ಸಿ ಟಿ ಮಂಜುನಾಥ್, ಶಿವಕುಮಾರ ಆರಾಧ್ಯ, ಕೆ ಟಿ ಶಿವಲಿಂಗಯ್ಯ ನೇತೃತ್ವ ವಹಿಸಿದ್ದರು.
ಬಿಎಸ್ ವೈ ಅಭಿಮಾನೋತ್ಸವ ಅಣಕಿಸಿದ ವಾಟಾಳ್ ನಾಗರಾಜ್ ವಿರುದ್ಧ ಬಿಜೆಪಿ ಆಕ್ರೋಶ
240

