ಮಂಡ್ಯ :- ಶ್ರೀ ಬಿಸಿಲು ಮಾರಮ್ಮ ದೇವಿ ಉತ್ಸವವನ್ನು ಹೊಸಹಳ್ಳಿ ಮತ್ತು ರಾಮನಹಳ್ಳಿ ಗ್ರಾಮಸ್ಥರು ಸಡಗರ ಸಂಭ್ರಮದಿಂದ ಆಚರಿಸಿದರು.
ಮಾರಮ್ಮ ದೇವಿಗೆ ತಂಬಿಟ್ಟು ಆರತಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ತಂಪು ಮಾಡುವ ಮೂಲಕ ಸಂಪ್ರದಾಯ ಬದ್ಧವಾಗಿ ಆಚರಣೆ ಮಾಡಿ ಸಂಭ್ರಮಿಸಿದರು.
ಶ್ರೀ ಬಿಸಿಲು ಮಾರಮ್ಮ ದೇವಸ್ಥಾನದ ಬಸಪ್ಪ ನೊಂದಿಗೆ ತಂಬಿಟ್ಟಿನ ಆರತಿ ಜೊತೆ ತಮಟೆ ನಗಾರಿ ಸದ್ದಿನ ಮೇಳದಲ್ಲಿ ಬಿಸಿಲು ಮಾರಮ್ಮ, ತಂಪು ಮಾರಮ್ಮ ಹಾಗೂ ಮಾರಮ್ಮ ದೇವಿಗೆ ತಂಬಿಟ್ಟಿನ ತಂಪು ತೋರಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಹಬ್ಬದ ಸಂಭ್ರಮ ಹಂಚಿಕೊಂಡ ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊಸಹಳ್ಳಿ ಶಿವಲಿಂಗೇಗೌಡ, ನಮ್ಮ ಪೂರ್ವಿಕರ ಕಾಲದಿಂದಲೂ ಮಾರಮ್ಮ ದೇವತೆಗಳ l ಹಬ್ಬ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ, ಹಿಂದೆ ತೀವ್ರ ಬೇಸಿಗೆಯ ಬಿಸಿಲಿನಿಂದಾಗಿ ಜನ ಮತ್ತು ಜಾನುವಾರುಗಳ ಆರೋಗ್ಯದಲ್ಲಿ ಏರುಪೇರಾದಾಗ, ಹಿರಿಯರು ದೇವಿಗೆ ತಂಪು ತೋರುವ ವಿಶಿಷ್ಟ ಆಚರಣೆಯನ್ನು ಆರಂಭಿಸಿದರು. ಬಿಸಿಲಿನ ತಾಪವನ್ನು ತಗ್ಗಿಸಲು ಮತ್ತು ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಪಡೆಯಲು ಈ ಪೂಜೆ ಸಲ್ಲಿಸಲಾಗುತ್ತಿದೆ ಎಂದರು.
ಈ ಹಬ್ಬವನ್ನು ಐದು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ಮನೆಯವರು ಮತ್ತು ಸಂಬಂಧಿಗಳೊಂದಿಗೆ ಜೊತೆಗೂಡಿ ಸಡಗರ ಸಂಭ್ರಮದೊಂದಿಗೆ ಆಚರಿಸುತ್ತೇವೆ ಎಂದು ಸ್ಮರಿಸಿದರು.
ನಗರಸಭಾ ಸದಸ್ಯ ಮೀನಾಕ್ಷಿ ಪುಟ್ಟಸ್ವಾಮಿ ಮಾತನಾಡಿ, ಹೊಸಹಳ್ಳಿ ಮತ್ತು ರಾಮನಹಳ್ಳಿ ಗ್ರಾಮದಲ್ಲಿರುವ ಶ್ರೀ ಬಿಸಿಲು ಮಾರಮ್ಮ ತಂಪು ಮಾರಮ್ಮ ಹಾಗೂ ಮಾರಮ್ಮ ದೇವತೆಗಳಿಗೆ ಬೇಸಿಗೆಕಾಲದಲ್ಲಿ ಪೂಜೆ ಸಲ್ಲಿಸುವ ಸಂಪ್ರದಾಯಿಕ ಹಬ್ಬವಾಗಿದೆ ಮೂರು ದಿನಗಳಿಂದ ಹಬ್ಬದ ಸಿದ್ಧತೆ ನಡೆಸಿ ತಂಬಿಟ್ಟನ್ನು ಮನೆಯಲ್ಲಿ ತಯಾರಿಸಿ ಪೂಜೆ ಮತ್ತು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುವುದು ನಮ್ಮ ನಂಬಿಕೆ, ಉತ್ತಮ ಮಳೆ ಬೆಳೆಯಾಗಲಿ ಸರ್ವರು ಸರ್ವ ರೋಗಗಳಿಂದ ಮುಕ್ತ ಜೀವನ ನಡೆಸಲು ಎಂಬುವುದು ಹಬ್ಬಗಳ ಆಶಯ ಎಂದು ತಿಳಿಸಿದರು.
ಇದೇ ವೇಳೆ ದೇವಾಲಯಗಳ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು ಶ್ರೀ ಬಿಸಿಲು ಮಾರಮ್ಮ ಬಸಪ್ಪ ನಿಗೆ ಅಲಂಕಾರ ಮಾಡಲಾಗಿತ್ತು.
ಹೊಸಹಳ್ಳಿ ರಾಮನಹಳ್ಳಿ ಯಜಮಾನರಾದ ಎಚ್.ಎಮ್. ಸುರೇಶ್ ಪಾಪೇಗೌಡ, ಬೊದರೆ ನಿಂಗೇಗೌಡ, ಸ್ವಾಮಿ, ಜೋಗಪ್ಪ l ನಾಗೇಶ್, ಹೊಸಹಳ್ಳಿ ಶಿವು, ಶೇಖರ್ ಇತರರಿದ್ದರು.
ಹೊಸಹಳ್ಳಿಯಲ್ಲಿ ಶ್ರೀ ಬಿಸಿಲು ಮಾರಮ್ಮನ ಹಬ್ಬದ ಸಂಭ್ರಮ
202

