ಪಾಂಡವಪುರ :- ಪಾಂಡವಪುರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮ ಗಾಂಜಾ ಮಾರಾಟ ಜಾಲ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಕುಂತಿ ಬೆಟ್ಟದ ಬಳಿ ಅಕ್ರಮ ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಹತ್ತು ಲಕ್ಷ ಮೌಲ್ಯದ ಗಾಂಜಾ ಮತ್ತು ಇಂಡಿಗೋ ಕಾರನ್ನು ವಶಕ್ಕೆ ಪಡೆದಿದ್ದು ಮೂವರನ್ನು ಸ್ಥಳದಲ್ಲಿಯೇ ಬಂಧಿಸಿದ್ದು, ಇನ್ನಿತರ ಮೂವರು ಪರಾರಿಯಾಗಿದ್ದಾರೆ
ಮೈಸೂರಿನ ಹೆಬ್ಬಾಳ ಇಂಡಸ್ಟ್ರಿಯಲ್ ಏರಿಯಾದ ಪಾಂಡವಪುರ ಶಾಂತಿನಗರದಲ್ಲಿ ವಾಸವಿದ್ದ ಸ್ವಾಮಿ ಗೌಡರ ಮಗ ಶ್ರೇಯಸ್ ಗೌಡ, ಮಾರಿಗುಡಿ ಬೀದಿಯ ಶ್ರೀನಿವಾಸರ ಮಗ ಶಶಿಕುಮಾರ್, ರವಿರ ಮಗ ವಿನೋದ್ ರನ್ನು ಬಂಧಿಸಲಾಗಿದ್ದು, ಬೀರ ಶೆಟ್ಟಹಳ್ಳಿಯ ಶ್ರೀನಿವಾಸರ ಮಗ ಕಾರು ಚಾಲಕ ಮಂಜುನಾಥ್, ಪಾಂಡವಪುರ ಪಟ್ಟಣದ ಶಾಂತಿನಗರದ ಪುರುಷೋತ್ತಮರ ಮಗ ಅರುಣ್ ಕುಮಾರ್ ಅಲಿಯಾಸ್ ಗಾಂಜಾ ಅರುಣ ಮತ್ತು ಪುರುಷೋತ್ತಮ ರ ಮಗ ವಿಜಯ್ ಕುಮಾರ್ ಆಲಿಯಾಸ್ ವಿಜಿ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ.
ಕುಂತಿಬೆಟ್ಟದ ಬಳಿ ಬಯಲು ಪ್ರದೇಶದಲ್ಲಿ ಕೆಲವು ವ್ಯಕ್ತಿಗಳು ಕೆ.ಎ-41-ಎನ್-6258 ರ ಟಾಟಾ ಇಂಡಿಗೋ ಸಿಲ್ವರ್ ಬಣ್ಣದ ಕಾರಿನಲ್ಲಿ ಅಕ್ರಮವಾಗಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡಲು ಬರುತ್ತಾರೆಂಬ ಮಾಹಿತಿ ಮೇರೆಗೆ ನಾಲ್ಕೈದು ದಿನದ ಹಿಂದೆ ಪಾಂಡವಪುರ ಪೋಲಿಸ್ ಇನ್ ಸ್ಪೆಕ್ಟರ್ ಶರತ್ ಕುಮಾರ್ ಹೆಚ್.ಪಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ವೆಂಕಟೇಶ, ಮಹಮ್ಮದ್ ಫಾರೂಕ್, ಕೃಷ್ಣಗೌಡ, ತೋಸಿಪ್, ಅನಿಲ್ ಕುಮಾರ್, ವರದರಾಜು, ಕಿರಣ್ ಕುಮಾರ್ ತಂಡವು ಪತ್ರಾಂಕಿತ ಅಧಿಕಾರಿಗಳು ಹಾಗೂ ಪಂಚರ ಸಮಕ್ಷಮ ದಾಳಿ ಮಾಡಿದ್ದು ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದು 20 ಕೆಜಿ 640 ಗ್ರಾಂ ತೂಕದ ಗಾಂಜಾ, ಕೃತ್ಯಕ್ಕೆ ಬಳಸಿದ ಟಾಟಾ ಇಂಡಿಕಾ ಕಾರನ್ನು ವಶಕ್ಕೆ ಪಡೆಯಲಾಗಿದೆ
. ತನಿಖೆ ವೇಳೆ ಗಾಂಜಾವನ್ನು ಓರಿಸ್ಸಾ ರಾಜ್ಯದ ಕೆಂಗಾ ಎಂಬಲ್ಲಿಗೆ ಹೋಗಿ ಅಲ್ಲಿಂದ ಖರೀದಿ ಮಾಡಿಕೊಂಡು ಬಂದು, ಹೆಚ್ಚಿನ ಬೆಲೆಗೆ ಇಲ್ಲಿ ಮಾರಾಟ ಮಾಡಲು ತಂದಿರುವುದಾಗಿ ಬಂದಿತ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು , ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ. ತಲೆಮರಿಸಿಕೊಂಡಿರುವ ಆರೋಪಿಗಳಿಗೆ ಪೊಲೀಸರು ಶೋಧ ನಡೆಸಿದ್ದು, ಅಕ್ರಮ ಗಾಂಜಾ ಮಾರಾಟ ಜಾಲ ಭೇದಿಸಿದ ಪಾಂಡವಪುರ ಠಾಣಾ ಅಧಿಕಾರಿ ಮತ್ತು ಸಿಬ್ಬಂಧಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧಿಕರಾದ ಡಾ. ಶೋಭಾರಾಣಿ ವಿ.ಜೆ. ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.

