ಮಂಡ್ಯ: ವಿಕಲ ಚೇತನರ ಉಚಿತ ಬಸ್ ಪಾಸ್ ದುರುಪಯೋಗ ಪಡಿಸಿಕೊಂಡ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರಿಗೆ ಪಿ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ 57 ಸಾವಿರ ರೂ. ದಂಡ ಹಾಗೂ ಒಂದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮದ್ದೂರು ತಾಲ್ಲೂಕು ಆತಗೂರು ಹೋಬಳಿ ಯರಗನಹಳ್ಳಿ ಗ್ರಾಮದ ಅಪ್ಪಾಜಿಗೌಡರ ಪುತ್ರಿ ಎ.ಶೃತಿ ಶಿಕ್ಷೆಗೆ ಗುರಿಯಾಗಿರುವ ಮಹಿಳೆ.
ಶೃತಿ ಅವರು ಸರ್ಕಾರಿ ನೌಕರರಾಗಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮನಿಂದ ನೀಡುವ ಅಂಗವಿಕಲರ ರಿಯಾಯಿತಿ ದರದ ಪಾಸನ್ನು ಪಡೆದುಕೊಂಡು, ದುರುಪಯೋಗಪಡಿಸಿಕೊಂಡಿದ್ದರು. ಸರ್ಕಾರಿ ನೌಕರರು ಅಂಗವಿಕಲರ ರೀಯಾಯಿತಿ ದರದ ಬಸ್ ಪಾಸ್ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲವೆಂದು ತಿಳಿದಿದ್ದರೂ ಸಹ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಡ್ಯ ಮತ್ತು ಮದ್ದೂರು ಘಟಕದಿಂದ ಅಂಗವಿಕಲರ ಬಸ್ ಪಾಸ್ ಪಡೆದು 2014 ಜನವರಿ 1 ರಿಂದ 2015 ಅಕ್ಟೋಬರ್ 17 ವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಸಂಚರಿಸಿ, ನಿಗಮಕ್ಕೆ 46640 ರೂಗಳ ನಷ್ಟವುಂಟು ಮಾಡಿ ಮೋಸ ಮಾಡಿರುವ ಬಗ್ಗೆ ದೂರು ನೀಡಲಾಗಿತ್ತು.
ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ಕಲಂ. 420 ಐ.ಪಿ.ಸಿ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಶೃತಿ ವಿರುದ್ಧ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಸದರಿ ಪ್ರಕರಣವು ಪಿ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಸಾಕ್ಷ್ಯಧಾರಗಳನ್ನು ಪರಿಗಣಿಸಿ ನ್ಯಾಯಾಲಯವು ಶೃತಿ ಕಲಂ. ೪೨೦ ಐ.ಪಿ.ಸಿ ರೀತ್ಯಾ ಆರೋಪಿತಳು ವಂಚನೆ ಮಾಡಿರುವುದಾಗಿ ಪರಿಗಣಿಸಿ ನ್ಯಾಯಾಧೀಶರಾದ ಜಿ.ಜೆ.ಶಿವಕುಮಾರ್ ರವರು, ಅಪರಾಧಿ ಶೃತಿಗೆ ಭಾದಂಸA ಕಲಂ. 420 ಅಡಿಯಲ್ಲಿನ ಅಪರಾಧಕ್ಕೆ 1 ವರ್ಷಗಳ ಸೆರೆಮನೆವಾಸ ಮತ್ತು 10,೦೦೦ ದಂಡ ವಿಧಿಸಿ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮರವರಿಗೆ 47,೦೦೦ ರೂಗಳ ಪರಿಹಾರ ನೀಡಬೇಕೆಂದು ತೀರ್ಪು ನೀಡಿರುತ್ತಾರೆ.
ಅಭಿಯೋಜನೆಯ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಶಿವಕುಮಾರ್ ವಾದ ಮಂಡಿಸಿದ್ದರು.
ವಿಕಲ ಚೇತನರ ಪಾಸ್ ದುರ್ಬಳಕೆ : ಮಹಿಳೆಗೆ ಶಿಕ್ಷೆ
165

