ಮಂಡ್ಯ :- ಕಿರುಗಾವಲು ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಸರಗಳ್ಳರನ್ನು ಬಂಧಿಸಿ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 16 ಸರಗಳ್ಳತನ ಪ್ರಕರಣವನ್ನು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭ ರಾಣಿ ವಿ. ಜೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಳವಳ್ಳಿ ತಾಲೂಕು ತಳಗವಾದಿ ಗ್ರಾಮದ ರೋಹಿತ್ ಅಲಿಯಾಸ್ ಗೆದ್ವಾ, ಬಾರ್ ಸಪ್ಲೈಯರ್ ನಂಜೇಗೌಡ ಟಿ ಎನ್ ಅಲಿಯಾಸ್ ಕಾಶಿ, ಚಾಲಕ ಗುರುಪ್ರಸಾದ್ ಟಿ ಹೆಚ್ ಅಲಿಯಾಸ್ ಗುರು, ಮದ್ದೂರು ತಾಲೂಕು ಆಲಭೂಜನಹಳ್ಳಿ ಗ್ರಾಮದ ಮಣಿಗೆರೆಯಲ್ಲಿ ವಾಸವಿದ್ದ ಮಾದೇಶ ಎಸ್ ಅಲಿಯಾಸ್ ಮಾದ ಬಂಧಿತ ಆರೋಪಿಗಳಾಗಿದ್ದು ಇವರಿಂದ 70.37 ಲಕ್ಷ ಮೌಲ್ಯದ 475.3 ಗ್ರಾಂ ಚಿನ್ನಾಭರಣ ಮತ್ತು ಎರಡು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ಮಾರ್ಚ್ ತಿಂಗಳಲ್ಲಿ ಅಣಸಾಲೆ ಗ್ರಾಮದ ಪುಟ್ಟಮ್ಮ ಇ -ಸ್ವತ್ತು ಮಾಡಿಸಲು ಚಿಕ್ಕ ಮುಲಗೂಡು ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಿ ವಾಪಸ್ ಚಿಕ್ಕ ಮುಲಗೂಡು – ರಾಮನಾಥ ಮೊಳೆ ರಸ್ತೆಯಲ್ಲಿ ಬರುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರೂ ಕುತ್ತಿಗೆಯಲ್ಲಿದ್ದ ಚಿನ್ನದ ತಾಳಿ, ಎರಡು ಗುಂಡು ಒಟ್ಟಾರೆ 27 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು,ಈ ಸಂಬಂಧ ಮಹಿಳೆ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು,
ಪ್ರಕರಣದ ತನಿಖೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶದಂತೆ, ಅಪರ ಪೊಲೀಸ್ ವರಿಷ್ಠಾಧಿಕಾರಿ ಸಿ ಇ ತಿಮ್ಮಯ್ಯ , ಎಸ್ ಇ ಗಂಗಾಧರಸ್ವಾಮಿ, ಮಳವಳ್ಳಿ ಪೊಲೀಸ್ ಉಪ ಅಧೀಕ್ಷಕ ಯಶವಂತ ಕುಮಾರ್ ಎಸ್ ಬಿ ರವರ ಮಾರ್ಗದರ್ಶನದಲ್ಲಿ ಹಲಗೂರು ವೃತನಿರೀಕ್ಷಕ ಶ್ರೀಧರ್ ಬಿ ಎಸ್ ನೇತೃತ್ವದಲ್ಲಿ ಕಿರುಗಾವಲು ಠಾಣೆಯ ಪೋಲಿಸ್ ಸಬ್ ಇನ್ ಸ್ಪೆಕ್ಟರ್ ರವಿಕುಮಾರ್, ಬೆಳಕವಾಡಿ ಠಾಣೆಯ ಪ್ರಕಾಶ್ ಬಿ. ವಿ, ಪ್ರೋಭೇಷನರಿ ಸಬ್ ಇನ್ ಸ್ಪೆಕ್ಟರ್ ಸುನಿಲ್ ಎಂ, ಸಿದ್ದಣ್ಣ, ಹರ್ಷ.ಪಿ.ಡಿ, ಜಯಂತ್.ಟಿ.ಜೆ, ಗೋಪಾಲ್,ಶ್ರೀಧರ್ ಮತ್ತು ಮುಖ್ಯ ಪೇದೆಗಳಾದ ರಿಯಾಜ್ ಪಾಷ, ಪ್ರಭುಸ್ವಾಮಿ, ಮಹೇಶ್, ರವಿಕಿರಣ್, ಲೋಕೇಶ್, ಪೇದೆಗಳಾದ ಸಿದ್ದರಾಜು. ಶಿವಕುಮಾರ್, ರಫೀಕ್ ನದಾಫ್, ಮಹೇಶ, ಅಂಬರೀಷ್, ಶ್ರೀನಿವಾಸ್, ಮಧುಕಿರಣ್, ಧನಂಜಯ್ ರವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.
ಅಪರಾಧ ಪತ್ತೆ ತಂಡವು ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಜಿಲ್ಲೆಯ 16 ಕಡೆ ಸರಗಳ್ಳತನ ಮಾಡಿರುವುದು ಬೆಳಕಿಗೆ ಬಂದಿದ್ದು, ನಾಲ್ವರ ತಂಡವು ಮಂಡ್ಯ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು, ಅರಕೆರೆ- 2, ಕೊಪ್ಪ, ಮಳವಳ್ಳಿ ಗ್ರಾಮಾಂತರ, ಕೆರಗೋಡು, ಶ್ರೀರಂಗಪಟ್ಟಣ ಬನ್ನೂರು ಹಾಗೂ ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದೊಂದು ಸರಗಳ್ಳತನ ನಡೆಸಿದ್ದಾರೆ ಎಂದು ಹೇಳಿದರು.
2022 ರಲ್ಲಿ ಎರಡು ಪ್ರಕರಣ,2023 ರಲ್ಲಿ -08 2024 ರಲ್ಲಿ -02,2026 ರಲ್ಲಿ 04 ಪ್ರಕರಣಗಳಲ್ಲಿ ಬಂಧಿತರು ಭಾಗಿಯಾಗಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ತಿಳಿಸಿದ ಅವರು ಸರಗಳ್ಳರನ್ನು ಪತ್ತೆಹಚ್ಚಿದ ತಂಡದ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

