ಮಂಡ್ಯ :- ಆಲಕೆರೆ ಗ್ರಾಮದಲ್ಲಿ ಮನೆಗೆ ನುಗ್ಗಿ ಮಹಿಳೆ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಮಾಂಗಲ್ಯ ಸರ ದೋಚಿದ್ದ ಇಬ್ಬರನ್ನು ಕೆರಗೋಡು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆಲಕೆರೆ ಗ್ರಾಮದ ಮಹದೇವಪ್ಪ ಆಲಿಯಾಸ್ ಮೋಟು ಬೀಡಿ ಮತ್ತು ಮಂಡ್ಯದ ಮರಿಗೌಡ ಬಡಾವಣೆಯ ಮಹೇಶ್ ಎಸ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 4.36 ಲಕ್ಷ ಮೌಲ್ಯದ 33 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಜೂನ್ 9 ರಂದು ಆಲಕೆರೆ ಗ್ರಾಮದ ನಾಗರಾಜು ಮುಂಜಾನೆ ಐದರ ಸಮಯದಲ್ಲಿ ಹಾಲು ಕರೆದು ಡೈರಿಗೆ ತೆರಳಿದ್ದು ಹೋಗುವ ವೇಳೆ ಮನೆಯ ಮುಂಬಾಗಿಲನ್ನು ಹೊರಗಡೆಯಿಂದ ಚಿಲಕ ಹಾಕಿದ್ದರು, ಮನೆಯ ಒಳಗಡೆ ಕೊಠಡಿಯಲ್ಲಿ ಮಗ ಕಿರಣ್ ಮಲಗಿದ್ದರೆ, ನಾಗರಾಜು ಪತ್ನಿ ಲೀಲಮ್ಮ ಮತ್ತೊಂದು ಕೊಠಡಿಯಲ್ಲಿ ನಿದ್ರಿಸುತ್ತಿದ್ದರು, ಈ ವೇಳೆ ಚಿಲಕ ತೆಗೆದು ಒಳ ನುಗ್ಗಿದ ಕಳ್ಳ ಕಿರಣ್ ಮಲಗಿದ್ದ ಕೊಠಡಿಗೆ ಹೊರಗಿನಿಂದ ಚಿಲಕ ಹಾಕಿ ಮತ್ತೊಂದು ಕೊಠಡಿಗೆ ನುಗ್ಗಿ ಲೀಲಮ್ಮರ ಕುತ್ತಿಗೆಯಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಮುಂದಾಗಿದ್ದು, ವಿರೋಧ ಮಾಡಿದ ಆಕೆ ಮೇಲೆ ಹಲ್ಲೆ ನಡೆಸಿ 30 ಗ್ರಾಂ ಮಾಂಗಲ್ಯ ಸರ, 5 ಗ್ರಾಂ ತಾಳಿ, ಮೂರು ಗ್ರಾಂ ಗುಂಡು, 2 ಗ್ರಾಂ ತೂಕದ ಕಾಸು ಒಟ್ಟಾರೆ 40 ಗ್ರಾಂ ತೂಕದ ಆಭರಣ ಕಸಿದು ಪರಾರಿಯಾಗಿದ್ದನು.
ಕೆರಗೋಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಪೊಲೀಸರ ತಂಡ ರಚಿಸಿದ್ದರು, ಅದರಂತೆ ತನಿಖೆ ಕೈಗೊಂಡ ತಂಡವು ಮಹಾದೇವಪ್ಪ ಮತ್ತು ಮಹೇಶ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದು ಇವರಿಂದ 33.4 ಗ್ರಾಂ ತೂಕದ ಚಿನ್ನದ ವಡವೆಗಳನ್ನು ವಶಪಡಿಸಿಕೊಂಡಿದ್ದು ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

