ಕಿರುಗಾವಲು :- ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ರೌಡಿ ಶೀಟರ್‌ನೊಬ್ಬನು ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ವೇಳೆ, ಕಿರುಗಾವಲು ಪೊಲೀಸ್ ಠಾಣೆಯ ಪಿಎಸ್ಐ ಡಿ. ರವಿಕುಮಾರ್ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.
ಭೀಮನಹಳ್ಳಿ ಗ್ರಾಮದ ಮಹೇಶ್ (34) ಎಂಬ ವ್ಯಕ್ತಿಯನ್ನು ಮಹಿಳೆಗೆ ಮೊಬೈಲ್ ಸಂದೇಶ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ನಾಲ್ವರು ಆರೋಪಿಗಳು ಚಾಕುವಿನಿಂದ ಇರಿದು ಹಾಗೂ ದೊಣ್ಣೆಗಳಿಂದ ಹೊಡೆದು ಹತ್ಯೆ ಮಾಡಿದ್ದರು. ಈ ಸಂಬಂಧ ರಾಮನಗರ ಜಿಲ್ಲೆಯ ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಸಿದ್ದರಾಜು ಅಲಿಯಾಸ್ ‘ಸೀಜರ್ ಸಿದ್ದು’, ರಾಜೇಶ್ ಸೇರಿದಂತೆ ನಾಲ್ವರನ್ನು ಕಿರುಗಾವಲು ಪೊಲೀಸರು ಬಂಧಿಸಿದ್ದರು.
ಕೊಲೆ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ಹುಲ್ಲೇಗಾಲ–ರಾಷ್ಟ್ರೀಯ ಹೆದ್ದಾರಿ 948ರ ಸಮೀಪದ ಕಾಲುವೆ ಬಳಿ ಎಸೆದು ಹೋಗಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ, ಪೊಲೀಸರು ಗುರುವಾರ ಸಂಜೆ ಆರೋಪಿ ಸಿದ್ದರಾಜುವನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದರು.
ಮಹಜರು ಮುಗಿಸಿ ಹಿಂದಿರುಗುವಾಗ, ಆರೋಪಿ ಬಹಿರ್ದೆಸೆಗೆ ಹೋಗುವುದಾಗಿ ಹೇಳಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಬಿಯರ್ ಬಾಟಲ್‌ನಿಂದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಪ್ರಭುಸ್ವಾಮಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣ ಎಚ್ಚೆತ್ತ ಪಿಎಸ್ಐ ಡಿ. ರವಿಕುಮಾರ್ ಅವರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ, ಆರೋಪಿ ಓಡಲು ಯತ್ನಿಸಿದ ಹಿನ್ನೆಲೆಯಲ್ಲಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಆರೋಪಿ ಸಿದ್ದರಾಜು ಹಾಗೂ ಪೊಲೀಸ್ ಸಿಬ್ಬಂದಿ ಪ್ರಭುಸ್ವಾಮಿ ಅವರಿಗೆ ಮಳವಳ್ಳಿ ತಾಲ್ಲೂಕು ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಇದಲ್ಲದೆ, ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಜೆ. ಶೋಭರಾಣಿ, ಮಳವಳ್ಳಿ ಉಪವಿಭಾಗದ ಡಿವೈಎಸ್ಪಿ ಯಶವಂತ್ ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎಸ್. ಶ್ರೀಧರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಕೊಲೆ ಆರೋಪಿ ಕಾಲಿಗೆ ಪೊಲೀಸರ ಗುಂಡೇಟು
183
previous post

