Friday, February 23, 2024
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ
HomeUncategorizedಮಂಡ್ಯ ಲೋಕಸಭಾ ಕ್ಷೇತ್ರ l ಚುನಾವಣೆಗೆ ಕಾಂಗ್ರೆಸ್ ನಿಂದ ಹೊಸಮುಖ

ಮಂಡ್ಯ ಲೋಕಸಭಾ ಕ್ಷೇತ್ರ l ಚುನಾವಣೆಗೆ ಕಾಂಗ್ರೆಸ್ ನಿಂದ ಹೊಸಮುಖ

ಮಂಡ್ಯ :- ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಹೊಸ ಮುಖವನ್ನು ಕಣಕ್ಕಿಳಿಸಲು ಮುಂದಾಗಿದ್ದು, ಜೆಡಿಎಸ್ – ಬಿಜೆಪಿ ಮೈತ್ರಿಕೂಟವನ್ನು ಎದುರಿಸಲು ಚುನಾವಣಾ ತಯಾರಿ ನಡೆಸಿದೆ.
ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿ ನಿರತರಾಗಿದ್ದ ಪಕ್ಷದ ನಾಯಕರು ಇದೀಗ ನಾಗಮಂಗಲ ಮೂಲದ ಉದ್ಯಮಿಯನ್ನು ಚುನಾವಣಾ ಅಖಾಡಕ್ಕೆ ತರಲು ಕಾರ್ಯೋನ್ಮುಖರಾಗಿದ್ದಾರೆ.
ಸಚಿವ ಎನ್.ಚೆಲುವರಾಯಸ್ವಾಮಿ ಸಂಬಂಧಿಯಾಗಿರುವ ಉದ್ಯಮಿ ಸ್ಟಾರ್ ಚಂದ್ರು ಕಾಂಗ್ರೆಸ್ ಅಭ್ಯರ್ಥಿ ಎಂದು ಈಗಾಗಲೇ ಬಿಂಬಿಸಲಾಗುತ್ತಿದ್ದು, ಕೆಪಿಸಿಸಿ ಸಹ ಇವರ ಹೆಸರನ್ನು ಹೈಕಮಾಂಡ್ ಗೆ ಶಿಫಾರಸು ಮಾಡಿದೆ, ವರಿಷ್ಠರ ಸಮ್ಮತಿ ದೊರೆತರೆ ಇವರೆ ಅಭ್ಯರ್ಥಿ ಎಂದು ಸಚಿವರ ಆಪ್ತರು ಹೇಳುತ್ತಿದ್ದಾರೆ.
ವಿಧಾನಪರಿಷತ್ ನ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಹಾಗೂ ದಕ್ಷಿಣ ಪದವೀಧರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಹೊಸ ಹುಮ್ಮಸ್ಸಿನಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಿತ್ತು, ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಮತ್ತೊಂದು ಕ್ಷೇತ್ರದಲ್ಲಿ ಪಕ್ಷ ಬೆಂಬಲಿಸಿದ್ದ ಶಾಸಕರು ಚುನಾಯಿತರಾಗಿದ್ದರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಲೋಕಸಭಾ ಚುನಾವಣೆಯ ಕಣ ಪ್ರತಿಷ್ಠಿತವಾಗಿದ್ದು, ಪಕ್ಷದಲ್ಲಿ ಆಕಾಂಕ್ಷಿತರ ಸಂಖ್ಯೆ ದೊಡ್ಡದಿದ್ದರೂ ಸಮರ್ಥ ಅಭ್ಯರ್ಥಿಯ ಹುಡುಕಾಟ ನಡೆದಿತ್ತು.
ಉಪಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದ ಚಿತ್ರನಟಿ ರಮ್ಯಾ ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಲಿದ್ದಾರೆ ಎಂದು ಕೆಪಿಸಿಸಿ ವಲಯದಲ್ಲಿ ಕೇಳಿ ಬಂದಿತ್ತು. ಸ್ಥಳೀಯ ಮಟ್ಟದಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ, ಮಾಜಿ ಶಾಸಕರಾದ ಕೆ.ಬಿ ಚಂದ್ರಶೇಖರ್, ಡಾ. ರವೀಂದ್ರ ಸೇರಿ ಹಲವರು ಆಕಾಂಕ್ಷಿತರಿದ್ದರು,ಆದರೆ ಲೋಕಸಭಾ ಚುನಾವಣೆಯಲ್ಲಿ ತಟಸ್ಥರಾಗಿ ಇರುವುದಾಗಿ ಮಧು ಮಾದೇಗೌಡ ದಿಡೀರ್ ಘೋಷಿಸಿ ಮೌನಕ್ಕೆ ಮೊರೆ ಹೊಗಿದ್ದಾರೆ.
ಪಕ್ಷದ ಹೈಕಮಾಂಡ್ ಲೋಕಸಭಾ ಚುನಾವಣೆಗೆ ಸಚಿವರನ್ನು ಕಣಕ್ಕಿಳಿಸಲು ಚಿಂತಿಸಿದೆ ಹಾಗಾಗಿ ಸಚಿವ ಚೆಲುವರಾಯಸ್ವಾಮಿ ಅಂತಿಮವಾಗಿ ಕಣಕ್ಕಿಳಿಯಲಿದ್ದಾರೆ ಎಂಬುದು ಪಕ್ಷದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಜೆಡಿಎಸ್ – ಬಿಜೆಪಿ ಮೈತ್ರಿಯಿಂದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಗೆ ಕ್ಷೇತ್ರ ಕೈ ತಪ್ಪಲಿದ್ದು, ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ, ಇದಕ್ಕೆ ಪೂರಕವಾಗಿ ಸುಮಲತಾ ಅಂಬರೀಶ್ ಕಾಂಗ್ರೆಸ್ ನಾಯಕರು ನಮ್ಮೊಂದಿಗೆ ಚರ್ಚಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು, ಸುಮಲತಾ ಅಂಬರೀಶ್ ಬಗ್ಗೆ ಪಕ್ಷದ ಸ್ಥಳೀಯ ನಾಯಕರಿಗೆ ಒಲವು ಇಲ್ಲವಾಗಿದ್ದು, ಈ ಬಾರಿ ಹೈಬ್ರಿಡ್ ಚುನಾವಣೆ ಇಲ್ಲ, ಪಕ್ಕಾ ನಾಟಿ ಎಂದು ಸಚಿವ ಚೆಲುವರಾಯಸ್ವಾಮಿ ಹೇಳುವ ಮೂಲಕ ಕಾಂಗ್ರೆಸ್ ಪಕ್ಷದಿಂದ ಸುಮಲತಾ ಅಂಬರೀಶ್ ಅಭ್ಯರ್ಥಿಯಾಗಲಿದ್ದಾರೆ ಎಂಬುದನ್ನು ತಳ್ಳಿ ಹಾಕಿದ್ದರು.
ಇದೀಗ ಸಚಿವ ಚೆಲುವರಾಯಸ್ವಾಮಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ತೀವ್ರ ಆಸಕ್ತಿ ವಹಿಸಿ ನಾಗಮಂಗಲ ಕ್ಷೇತ್ರದವರಾದ, ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಸ್ಟಾರ್ ಚಂದ್ರು ರನ್ನ ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಕೆಪಿಸಿಸಿ ನಾಯಕರ ಜೊತೆ ಚರ್ಚಿಸಿ ಹೈಕಮಾಂಡ್ ವರಿಷ್ಠರಿಗೆ ತಲುಪಿರುವ ಆಕಾಂಕ್ಷಿತರ ಪಟ್ಟಿಯಲ್ಲಿ ಮಂಡ್ಯ ಕ್ಷೇತ್ರಕ್ಕೆ ಸ್ಟಾರ್ ಚಂದ್ರು ಒಬ್ಬರ ಹೆಸರನ್ನೇ ಸೂಚಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರಿಗೆ ಪರಿಚಯ ಇಲ್ಲದ, ಕ್ಷೇತ್ರದ ಮತದಾರರು ನೋಡಿರದ ಉದ್ಯಮಿಯನ್ನು ಲೋಕಸಭಾ ಚುನಾವಣಾ ಕಣಕ್ಕೆ ಅಭ್ಯರ್ಥಿಯನ್ನಾಗಿಸುತ್ತಿರುವ ಬಗ್ಗೆ ಪಕ್ಷದ ಜಿಲ್ಲಾ ನಾಯಕರು ವಿಧಾನಪರಿಷತ್ ನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ದಿನೇಶ್ ಗೂಳಿಗೌಡರನ್ನ ಅಭ್ಯರ್ಥಿಯನ್ನಾಗಿ ಮಾಡಿದ್ದೆವು ಗೆಲ್ಲಲಿಲ್ಲವಾ ಎಂಬ ಸಮರ್ಥನೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಸ್ಟಾರ್ ಚಂದ್ರು ಸ್ಪರ್ಧೆ ಗೆ ಹಸಿರು ನಿಶಾನೆ ತೋರಲಿದೆಯಾ ಎಂಬುದನ್ನು ಕಾಯ್ದು ನೋಡಬೇಕಾಗಿದ್ದು, ಚುನಾವಣೆ ಹೊತ್ತಿನ ರಾಜಕೀಯ ಬೆಳವಣಿಗೆ ಹಾಗೂ ಪ್ರತಿಪಕ್ಷದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದರ ಮೇಲೆ ಕಾಂಗ್ರೆಸ್  ಅಭ್ಯರ್ಥಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು,ಸದ್ಯಕ್ಕೆ ಸ್ಟಾರ್ ಚಂದ್ರು ಅಭ್ಯರ್ಥಿ ಎಂಬುದು ಕಾಂಗ್ರೆಸ್ ವಲಯದಲ್ಲಿ ಬಿಂಬಿತವಾಗಿದ್ದು, ಅವರು ಸಹ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
ಅತೀ ಕಡಿಮೆ ಬೆಲೆಯಲ್ಲಿ ವೆಬ್ ಸೈಟ್‌ ಮಾಡಿಕೊಡಲಾಗುತ್ತದೆ

Most Popular

Recent Comments