ಮಂಡ್ಯ :- ಮನ್ಮುಲ್ ನಿರ್ದೇಶಕಿ ರೂಪ ವಿರುದ್ಧ ಮಂಡ್ಯ ಜಿಲ್ಲಾ ಸಹಕಾರ ಯೂನಿಯನ್ ಸಹಾಯಕ ಉಪ ನಿಬಂಧಕರ ಜೊತೆಗೂಡಿ ಕಾಂಗ್ರೆಸ್ ನಾಯಕರು ಷಡ್ಯಂತ್ರ ರೂಪಿಸಿ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲು ಮುಂದಾಗಿದೆ ಎಂದು ಆರೋಪಿಸಿ ಮಂಡ್ಯದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಸಹಕಾರ ಒಕ್ಕೂಟದ ಕಚೇರಿ ಎದುರು ಪಕ್ಷದ ಕಾರ್ಯಕರ್ತರು ಪ್ರತಿಭಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಹಾಗೂ ಒಕ್ಕೂಟದ ಸಹಾಯಕ ಉಪ ನಿಬಂಧಕಿ ಎ ಆರ್ ಅನಿತಾ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶಿಸಿದರು.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಮದ್ದೂರು ತಾಲೂಕಿನಿಂದ ಬಿಜೆಪಿ ಪಕ್ಷದಿಂದ ರೂಪ ಆಯ್ಕೆಯಾಗಿದ್ದು, ಆದರೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಅವರಿಗೆ ರಾಜಕೀಯವಾಗಿ ಕಿರುಕುಳ ನೀಡುತ್ತಿದೆ, ಸ್ಥಳೀಯ ಶಾಸಕರು ಹಾಗೂ ಸಚಿವರು ಷಡ್ಯಂತ್ರ ರೂಪಿಸಿ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕರ ಜೊತೆಗೂಡಿರುವ ಸಹಕಾರ ಒಕ್ಕೂಟದ ಸಹಾಯಕ ಉಪನಿಬಂಧಕಿ ಎ ಆರ್ ಅನಿತಾ ಏಕ ಪಕ್ಷಿಯವಾಗಿ ವರ್ತಿಸುತ್ತಿದ್ದಾರೆ, ನಿರ್ದೇಶಕಿ ರೂಪ ರವರ ವಕಾಲತ್ತು ಸ್ವೀಕಾರ ಮಾಡಿಲ್ಲ, ಬದಲಾಗಿ ರಾಜಕೀಯ ಪ್ರಭಾವಕ್ಕೆ ಒಳಗಾಗಿದ್ದಾರೆ, ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ವಕಾಲತ್ತು ಇದ್ದರೂ ಸಹ ನಿರ್ದೇಶಕ ಸ್ಥಾನದಿಂದ ವಜಾ ಗೊಳಿಸಲು ಪಿತೂರಿ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನದಿಂದ ರೂಪಾ ರನ್ನು ವಜಾ ಮಾಡಬಾರದು, ರಾಜಕೀಯ ಪ್ರಭಾವಕ್ಕೆ ಒಳಗಾಗಿ ಏಕ ಪಕ್ಷಯವಾಗಿ ವರ್ತಿಸುತ್ತಿರುವ ಜಿಲ್ಲಾ ಸಹಕಾರ ಒಕ್ಕೂಟದ ಸಹಾಯಕ ಉಪ ನಿಬಂಧಕಿ ಎ ಆರ್ ಅನಿತಾ ರನ್ನು ಸೇವೆಯಿಂದ ವಜಾ ಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ಅಶೋಕ್ ಜಯರಾಮ್ ನೇತೃತ್ವ ವಹಿಸಿದ್ದರು.