ಮಂಡ್ಯ :- ಕಳೆದ ಹಲವಾರು ತಿಂಗಳುಗಳಿಂದ ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಸುವಂತೆ ಒತ್ತಾಯಿಸಿ ನಾಡಕಚೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರ ಆಪರೇಟರ್ ಗಳು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕಳೆದ ಮೇ ತಿಂಗಳವರೆಗೆ ಬಾಕಿ ಇರುವ ವೇತನ ಪಾವತಿಸುವಂತೆ ಒತ್ತಾಯಿಸಿದರು.
ಕಳೆದ ಹಲವಾರು ತಿಂಗಳಿಂದ ವೇತನ ನೀಡದ ಹಿನ್ನೆಲೆಯಲ್ಲಿ ಜೀವನ ನಿರ್ವಹಣೆ ಕಷ್ಟಕರವಾಗಿತ್ತು. ಜಿಲ್ಲಾಡಳಿತದ ಗಮನಕ್ಕೆ ತಂದಾಗ ಅನುದಾನ ಬಿಡುಗಡೆಯಾಗದೆ ಇರುವ ವಿಚಾರ ತಿಳಿದು ಕಳೆದ ತಿಂಗಳು ಅಟಲ್ ಜೀ ಜನಸ್ನೇಹಿ ನಿರ್ದೇಶನಾಲಯಕ್ಕೆ ತೆರಳಿ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಮಾಡಿದ ಹಿನ್ನಲೆಯಲ್ಲಿ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಅನುದಾನವನ್ನು ಬಿಡುಗಡೆ ಮಾಡಿದ್ದರು, ಈ ಬಗ್ಗೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ವಿಚಾರಿಸಿದಾಗ ವಿಷಯ ನಿರ್ವಾಹಕಿ ಸುಮ ಅಟಲ್ ಜೀ ಜನಸ್ನೇಹಿ ಕೇಂದ್ರದಿಂದ ಪತ್ರ ಮಾತ್ರ ಬಂದಿದ್ದು, ಹಣ ಜಮಾ ಆಗಿಲ್ಲವೆಂದು ಸುಳ್ಳು ಹೇಳಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಪರಿಶೀಲಿಸಿದಾಗ ಹಣ ಜಮಾ ವಾಗಿರುವುದು ಕಂಡುಬಂದಿದ್ದು, ಜಿಲ್ಲಾಧಿಕಾರಿ ಅನುಮೋದನೆ ಬಾಕಿ ಇದೆ ಅನುಮೋದನೆ ನಂತರ ಎರಡು ಮೂರು ದಿನದಲ್ಲಿ ಏಜೆನ್ಸಿಯವರಿಗೆ ಹಣ ಪಾವತಿ ಮಾಡಿ ಆಪರೇಟರ್ ಗಳಿಗೆ ವೇತನ ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.
ಆದರೆ ಇದುವರೆಗೆ ಸ್ವಿಸ್ ಕಂಪನಿಯವರಿಗೆ ಹಣ ಸಂದಾಯವಾಗಿರುವುದಿಲ್ಲ, ಸ್ವಿಸ್ ಕಂಪನಿಯವರನ್ನು ವಿಚಾರಿಸಲಾಗಿ ಜಿಲ್ಲಾಡಳಿತ ದಿಂದ ಹಣ ಸಂದಾಯವಾಗಿಲ್ಲ ಎಂದು ತಿಳಿಸಿದ್ದಾರೆ, ಇದರಿಂದ ಬಾಕಿ ವೇತನ ಪಾವತಿಯಾಗದೆ ಸಿಬ್ಬಂದಿಗಳ ಜೀವನ ನಿರ್ವಹಣೆ ಕಷ್ಟಕರವಾಗಿದೆ, ಈ ಕೂಡಲೇ ಸಂಬಳದ ಅನುದಾನವನ್ನು ಅನುಮೋದನೆಗೊಳಿಸಿ ಬಾಕಿ ವೇತನ ಪಾವತಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.
ಎಚ್.ಎನ್ ಶೋಭಾ,ಮಹೇಶ್, ಗಣೇಶ್, ರೂಪ,ಜಗದೀಶ,ಹೇಮಂತ ನೇತೃತ್ವ ವಹಿಸಿದ್ದರು.