ಮಂಡ್ಯ :- ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಹಿಂಪಡೆಯಬೇಕು ಎಂದು ಒತ್ತಾಯಿಸಿ ಜಿಲ್ಲೆಯ ವಿವಿದೆಡೆ ಬಿಜೆಪಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಿದರು.
ಜಿಲ್ಲಾ ಕೇಂದ್ರ ಮಂಡ್ಯ ನಗರ ತಾಲೂಕು ಕೇಂದ್ರಗಳಲ್ಲಿ ಪಕ್ಷದ ಕಾರ್ಯಕರ್ತರು ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಬಿಜೆಪಿ ಮುಖಂಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ಪೆಟ್ರೋಲ್-ಡಿಸೇಲ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಅವೈಜ್ಞಾನಿಕವಾದದ್ದು. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ, ಗ್ಯಾರಂಟಿ ಯೋಜನೆಗಳಿಗಾಗಿ ಹಣ ಹೊಂದಿಸಲು ರಾಜ್ಯ ಸರ್ಕಾರ ಜನರ ಜೇಬಿಗೆ ಕೈ ಹಾಕಿದೆ. ಬೆಲೆ ಏರಿಕೆಯಿಂದಾಗಿ ಮುಂಬರುವ ದಿನಗಳಲ್ಲಿ ಸಾರಿಗೆ ಹಾಗೂ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳವಾಗಲಿದೆ. ಮಧ್ಯಮ ವರ್ಗ ಹಾಗೂ ಬಡವರ ಜೀವನ ದುಸ್ತರವಾಗಲಿದೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ಸಹಜವಾಗಿ ಸಾಗಾಣಿಕೆ ವೆಚ್ಚ ಹೆಚ್ಚಾಗಲಿದೆ. ಇದರಿಂದಾಗಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ತರಕಾರಿ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಇನ್ನೂ ದುಬಾರಿಯಾಗಲಿದೆ. ಹಾಗಾಗಿ ಈ ಕೂಡಲೇ ತೈಲ ಬೆಲೆ ಏರಿಕೆ ಮಾಡಿರುವುದನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು .
ಮುಖಂಡರಾದ ಅಶೋಕ್ ಜಯರಾಂ, ವಸಂತ್‌ಕುಮಾರ್, ಸಿ.ಟಿ.ಮಂಜುನಾಥ್, ಶಿವಕುಮಾರ ಆರಾಧ್ಯ, ವಿವೇಕ್, ಹೊಸಹಳ್ಳಿ ಶಿವು, ಚಾಮರಾಜು, ಸಿದ್ದರಾಜುಗೌಡ, ಭೀಮೇಶ್, ಶಂಕರ್, ಚಂದ್ರು ನೇತೃತ್ವ ವಹಿಸಿದ್ದರು.
ಪಾಂಡವಪುರದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಐದು ದ್ವೀಪದ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಶ್ರೀರಂಗಪಟ್ಟಣದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟಿಸಿ ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು.