ಮಂಡ್ಯ :- ವೈದ್ಯಕೀಯ ಪ್ರವೇಶಾತಿ ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಈಗಾಗಲೇ ನಡೆದಿರುವ ಪರೀಕ್ಷೆ ರದ್ದುಪಡಿಸಿ ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಷ್ಟ್ರಪತಿಗೆ ಮನವಿ ಪತ್ರ ರವಾನಿಸಿದರು.
ವೈದ್ಯಕೀಯ ಪ್ರವೇಶಾತಿಗೆ ದೇಶದಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವುದು ವೈದ್ಯಕೀಯ ಅಧ್ಯಯನ ಮಾಡಲು ಮುಂದಾಗಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗಿದೆ, ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಫಲಿತಾಂಶದಲ್ಲಿ 67 ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್ ಬಂದಿರುವುದು ಅಷ್ಟೇ ಅಲ್ಲದೆ ಒಂದೇ ಪರೀಕ್ಷಾ ಕೇಂದ್ರದ ಎಂಟು ವಿದ್ಯಾರ್ಥಿಗಳು ಪ್ರಥಮ
ರ‍್ಯಾಂಕ್ ಪಡೆದಿರುವುದು ಅಕ್ರಮ ನಡೆದಿರುವುದಕ್ಕೆ ಸಾಕ್ಷಿಯಾಗಿದೆ,ಪರೀಕ್ಷ ಬರೆದ ವಿದ್ಯಾರ್ಥಿಗಳಿಗೆ ತರಾತುರಿಯಲ್ಲಿ ಕೃಪಾಂಕ ನೀಡಿರುವುದು, ಲೋಕಸಭೆ ಚುನಾವಣಾ ಫಲಿತಾಂಶ ದಿನ ನೀಟ್ ಫಲಿತಾಂಶ ಪ್ರಕಟಿಸಿರುವುದು ಮತ್ತಷ್ಟು ಅನುಮಾನ ಹೆಚ್ಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀಟ್ ಪರೀಕ್ಷೆ ಫಲಿತಾಂಶ ನಂತರ ದೇಶದಲ್ಲಿ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಡುವ ಸರ್ಕಾರ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಳ್ಳದಂತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ನೀಟ್ ಪರೀಕ್ಷೆ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಈಗಾಗಲೇ ಪರೀಕ್ಷೆ ರದ್ದುಪಡಿಸಿ ಕೂಡಲೇ ಮರು ಪರೀಕ್ಷೆ ನಡೆಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.
ಒಕ್ಕೂಟದ ಮುಖಂಡರಾದ ಮಂಜು ಬಂಡೂರು.ದೀಲಿಪ್,ಉಲ್ಲಾಸ್,ಅನಿಲ್,ರಾಕೇಶ್, ನವ್ಯಶ್ರೀ,ಗೌತಮಿ,ತನುಶ್ರೀ,ಅಮೃತ,ಭಾನುಪ್ರಿಯ,ಸುಚಿತ್ರ ನೇತೃತ್ವ ವಹಿಸಿದ್ದರು.