ಮಂಡ್ಯ :- ಕೆ ಆರ್ ಎಸ್ ಅಚ್ಚುಕಟ್ಟು ಪ್ರದೇಶದ ರೈತರು ಮುಂಗಾರು ಬೆಳೆ ಬೆಳೆಯಲು ಜಲಾಶಯದಿಂದ ನಾಲೆಗಳಿಗೆ ನಿರಂತರ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ) ಆಶ್ರಯದಲ್ಲಿ ರೈತರು ಕಾವೇರಿ ನೀರಾವರಿ ನಿಗಮದ ಎದುರು ಪ್ರತಿಭಟನೆ ನಡೆಸಿ ಕೆ ಆರ್ ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಹರಿಸುವ ಅವೈಜ್ಞಾನಿಕ ಕ್ರಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ವರ್ಷದಿಂದ ಭೀಕರ ಬರ ಪರಿಸ್ಥಿತಿ ಪರಿಣಾಮ ರೈತರು ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ. ಬರದಿಂದ ತತ್ತರಿಸಿದ್ದ ಜಿಲ್ಲೆಯ ಜನರಿಗೆ ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರು ಸಂಪೂರ್ಣ ಭರ್ತಿಯಾಗಿರುವುದು ರೈತರಲ್ಲಿ ಸಂತಸ ತಂದಿದೆ. ಕನ್ನಂಬಾಡಿ ತುಂಬಿದ ಸಂದರ್ಭದಲ್ಲಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನಿರಂತರ ನೀರು ಹರಿಯುವಿಕೆ ವಾಡಿಕೆ ಪದ್ಧತಿ ಇತ್ತು, ಆದರೆ ಇದೀಗ ಜಲಾಶಯ ಭರ್ತಿಯಾಗಿದ್ದರೂ ಸಹ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲ ಮುಂದಾಗಿರುವುದು ಸರಿಯಲ್ಲ, ಉಸ್ತುವಾರಿ ಸಚಿವರು, ಶಾಸಕರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿಲುವಿನಲ್ಲಿ ಸ್ವಷ್ಟತೆ ಇಲ್ಲದಿರುವುದು ರೈತರಲ್ಲಿ ಆತಂಕ ಮೂಡಿಸಿದೆ, ರೈತರಲ್ಲಿನ ಆತಂಕ ನಿವಾರಣೆಗೆ ನಾಲೆಗಳಿಗೆ ನಿರಂತರ ನೀರು ಹರಿಸುವ ನಿರ್ಧಾರ ಕೈಗೊಂಡು ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಕೆರೆ ಕಟ್ಟೆಗಳನ್ನ ಶೀಘ್ರ ತುಂಬಿಸಬೇಕು, ಕೆರೆ ಅಚ್ಚುಕಟ್ಟು ರೈತರಿಗೆ ಭತ್ತದ ಸಸಿ ಮಡಿಗೆ ಅವಕಾಶ ನೀಡಿ ಭತ್ತ ಬೆಳೆಯಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ವಿ.ಸಿ.ನಾಲಾ ಕೊನೆಯ ಭಾಗದ ಮದ್ದೂರು, ಮಳವಳ್ಳಿ, ಕೆ.ಎಂ.ದೊಡ್ಡಿ, ಕೊಪ್ಪ ಭಾಗದ ನಾಲೆಗಳಿಗೆ ನೀರನ್ನು ಹರಿಸಿ ಮುಂಗಾರು ಬೆಳೆಗೆ ಅವಕಾಶ ಮಾಡಬೇಕು.,ಮುಖ್ಯ ನಾಲೆಗಳಿಂದ ಉಪನಾಲೆಗಳಿಗೆ ನೀರು ಸರಬರಾಜು ಸಮರ್ಪಕವಾಗಿ ಹರಿಯದೆ ರೈತರ ಜಮೀನುಗಳಿಗೆ ನೀರು ದೊರಕದ ಹಿನ್ನೆಲೆಯಲ್ಲಿ. ನಾಲೆಗಳಲ್ಲಿನ ಹೂಳು ಗಿಡ ಗಂಟೆಗಳನ್ನು ಸ್ವಚ್ಛಗೊಳಿಸಬೇಕು,ಜಿಲ್ಲಾ ವ್ಯಾಪ್ತಿಯ ಸಕ್ಕರೆ ಕಾರ್ಖಾನೆಗಳಿಗೆ ನೀರಿನ ಕೊರತೆ ಉಂಟಾಗಿ ನಿರಂತರ ಕಬ್ಬು ಅರೆಯುವಿಕೆ ಸಾದ್ಯವಾಗುತ್ತಿಲ್ಲ ಹಾಗಾಗಿ ಕಾರ್ಖಾನೆಗಳಿಗೆ ನೀರಿನ ಲಭ್ಯತೆ ಪೂರೈಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಎಸ್ ಮಂಜೇಶ್,ಬೋರ ಲಿಂಗೇಗೌಡ,ವೆಂಕಟೇಶ್ ಪಣ್ಣೆ ದೊಡ್ಡಿ, ಸೋ.ಸಿ ಪ್ರಕಾಶ್,ಆರ್,ಕಾಂತಯ್ಯ,ಡಿ.ಎಸ್ ಚಂದ್ರಣ್ಣ, ಶಿವಲಿಂಗೇಗೌಡ,ಕಾಂತರಾಜು, ಪಿ.ಕೆ ರಮೇಶ್ ನೇತೃತ್ವ ವಹಿಸಿದ್ದರು.