ಮಂಡ್ಯ :- ಕನ್ನಡಿಗರ ಮೇಲೆ ಹಿಂದಿ ಹೇರಿಕೆ ವಿರೋಧಿಸಿ ಹಿಂದಿ ದಿವಸವನ್ನು ಕರಾಳ ದಿನವನ್ನಾಗಿ ಆಚರಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ( ನಾರಾಯಣಗೌಡ ಬಣ ) ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಹುನ್ನಾರದ ವಿರುದ್ಧ ಕಿಡಿಕಾರಿದರು
ಭಾರತ ಒಂದು ಒಕ್ಕೂಟ ರಾಷ್ಟ್ರ, ಯೂನಿಯನ್ ಆಫ್ ಸ್ಟೇಟ್ಸ್, ಬ್ರಿಟಿಷ್ ವಸಾಹತುಶಾಹಿ ಆಡಳಿತ ಕೊನೆಗೊಂಡ ನಂತರ ಬೇರೆ ಬೇರೆ ಪ್ರಾಂತ್ಯಗಳಾಗಿ ಗುರುತಿಸಿಕೊಂಡಿದ್ದ ಭೂಭಾಗಗಳೆಲ್ಲ ಒಂದಾಗಿ ಭಾರತ ಒಕ್ಕೂಟ ನಿರ್ಮಾಣವಾಗಿದೆ. ಒಂದು ಒಕ್ಕೂಟವಾಗಿ ಎಲ್ಲ ಪ್ರಾಂತ್ಯಗಳ ಭಾಷೆ, ಸಂಸ್ಕೃತಿ, ಇತಿಹಾಸ, ಆಚಾರ- ವಿಚಾರಗಳನ್ನು ಗೌರವಿಸುವ ಹೊಣೆ ಒಕ್ಕೂಟದ್ದಾಗಿದೆ. ವಿವಿಧತೆಯಲ್ಲಿ ಏಕತೆ ಎಂಬುದು ಒಕ್ಕೂಟದ ಮೂಲಮಂತ್ರ ಆದರೆ ಈ ಒಗ್ಗಟ್ಟನ್ನು ಮುರಿಯುವ ಕೆಲಸವನ್ನು ಹಿಂದಿ ಸ್ಥಾಮ್ರಾಜ್ಯಶಾಹಿಗಳು ನಿರಂತರವಾಗಿ ನಡೆಸುತ್ತಲೇ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೈವಿಧ್ಯತೆಯ ನೆಲದಲ್ಲಿ ಒಂದು ಧರ್ಮ, ಒಂದು ಭಾಷೆ, ಒಂದು ಸಂಸ್ಕೃತಿಯನ್ನು ಬಲವಂತವಾಗಿ ಎಲ್ಲರ ಮೇಲೂ ಹೇರುವುದು ಕ್ರೌರ್ಯ ಮತ್ತು ರಾಜಕೀಯ ಗೂಂಡಾಗಿರಿ, ಸಾಂಸ್ಕೃತಿಕ ಭಯೋತ್ಪಾದನೆ ವಾಗಿದೆ ಭಾರತದಲ್ಲಿ ಎಲ್ಲಾ ಭಾಷೆಗಳನ್ನು ಜನತೆ ಮಾತನಾಡುತ್ತಿರುವುದರಿಂದ ಸಮಗ್ರ ದೇಶವಾಗಿದೆ, ಆದರೆ ಇಂತಹ ಭಾಷೆಗಳನ್ನು ತುಳಿಯಲು ಹಿಂದಿ ದಿವಸ್ ಆಚರಣೆ ಮಾಡಲಾಗುತ್ತಿದೆ,ಅನ್ಯ ಭಾಷಿಗರ ಮೇಲೆ ಹಿಂದಿ ಹೇರಿಕೆ ಮಾಡುವ ಹುನ್ನಾರ ವಾಗಿದೆ ಎಂದು ಆಕ್ರೋಶಿದರು.
ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಮಾಡುವ ಪ್ರಸ್ತಾಪವನ್ನು ಸಂವಿಧಾನ ಕರಡು ರಚನೆಯ ಸಂದರ್ಭದಲ್ಲೇ ತಿರಸ್ಕರಿಸಲಾಗಿದೆ. ಹಿಂದಿಯೂ ಕನ್ನಡದ ಹಾಗೆಯೇ ಒಂದು ಭಾಷೆ, ಅದಕ್ಕೆ ಯಾವ ಹೆಚ್ಚುಗಾರಿಕೆಯೂ ಇಲ್ಲ, ಇರಬೇಕಾಗೂ ಇಲ್ಲ. ಕೇಂದ್ರ ಸರ್ಕಾರ ತನ್ನ ಆಡಳಿತಕ್ಕಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಬಳಸಿಕೊಳ್ಳುತ್ತಿದೆ. ಇಂಗ್ಲಿಷ್ ಅನ್ನು ಬಿಟ್ಟು ಕೇವಲ ಹಿಂದಿಯನ್ನು ಮಾತ್ರ ಆಡಳಿತ ಭಾಷೆಯನ್ನಾಗಿ ಮಾಡಿಕೊಳ್ಳುವ ಹುನ್ನಾರವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ,
ಕೇಂದ್ರ ಸರ್ಕಾರ ಈ ಕೂಡಲೇ ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ ಎಲ್ಲ 22 ಭಾಷೆಗಳನ್ನೂ ಅಧಿಕೃತ, ಆಡಳಿತ ಭಾಷೆಗಳನ್ನಾಗಿ ಮಾಡಿ ದೇಶದ ಬಹುತ್ವ, ಸಾರ್ವಭೌಮತೆಯನ್ನು ಕಾಪಾಡಬೇಕು. ಹಿಂದಿಗೆ ಅನೈತಿಕವಾಗಿ ಮನ್ನಣೆ ನೀಡುವ ಸಂವಿಧಾನದ 343 ರಿಂದ 351ನೇ ವಿಧಿಗಳನ್ನು ರದ್ದುಪಡಿಸಿ ಎಲ್ಲ ಭಾಷೆಗಳೂ ಒಕ್ಕೂಟದ ದೃಷ್ಟಿಯಲ್ಲಿ ಸಮಾನ ಎಂದು ಸಾರಬೇಕು ಎಂದು ಆಗ್ರಹಿಸಿದರು.
ವೇದಿಕೆ ರಾಜ್ಯ ಸಮಿತಿ ಸದಸ್ಯ ಮಾ ಸೋ ಚಿದಂಬರ್. ಜಿಲ್ಲಾಧ್ಯಕ್ಷ ಕೆ ಟಿ ಶಂಕರೇಗೌಡ. ಮಣಿಗೆರೆ ರಾಮಚಂದ್ರಗೌಡ, ಅಶೋಕ್,ಎಂ.ಪಿ ಸ್ವಾಮಿ, ಭಾರತೀ ಕುಮಾರ್,ಆರ್.ಕೇಶವ, ಪುಟ್ಟ ಮಲ್ಲಯ್ಯ,ಆನಂದ,ಎಂ.ಜಿ ಕಾಂತರಾಜು ನೇತೃತ್ವ ವಹಿಸಿದ್ದರು.