ಮಂಡ್ಯ :- ದೇಶದಲ್ಲಿ ಹೆಚ್ಚಾಗುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಖಂಡಿಸಿ ಮಹಿಳೋದಯ ಮಹಿಳಾ ಒಕ್ಕೂಟ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಸರ್ ಎಂ ವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಒಕ್ಕೂಟದ ಕಾರ್ಯಕರ್ತೆ ಯರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಸ್ನಾತಕೋತರ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ, ಉತ್ತರಖಂಡದ ಡೇಹ್ರಾ ಡೋನ್ ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, ಕರ್ನಾಟಕದ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಸೇರಿದಂತೆ ದೇಶದಲ್ಲಿ ಪ್ರತಿನಿತ್ಯ ಮಹಿಳೆಯರ ಮೇಲೆ ಅತ್ಯಾಚಾರ ಕೊಲೆ, ಲೈಂಗಿಕ ಕಿರುಕುಳ ಪ್ರಕರಣಗಳು ಪ್ರತಿನಿತ್ಯ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಕೊಲ್ಕತ್ತಾ ವೈದ್ಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ,ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಮರಣದಂಡನೆಗೆ ಗುರಿಪಡಿಸಬೇಕು, ಮಹಿಳೆಯರ ಮೇಲೆ ಹೀನ ಕೃತ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಉದ್ಯೋಗಸ್ಥ ಸ್ಥಳದಲ್ಲಿ ಮಹಿಳೆಯರ ಸುರಕ್ಷತೆ ವಾತಾವರಣ ನಿರ್ಮಿಸಬೇಕು, ಹೆಣ್ಣು ಮಕ್ಕಳ ವಸತಿ ನಿಲಯಗಳ ಬಳಿ ಸೂಕ್ತ ಭದ್ರತೆ ನೀಡಬೇಕು, ಮಹಿಳೆಯರ ಮೇಲೆ ನಡೆಯುವ ಅಪರಾಧಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ತುರ್ತು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ನ್ಯಾಯಾಲಯಗಳು ತ್ವರಿತ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು, ಮಹಿಳೆಯರು ನಿರ್ಭೀತಿ ಜೀವನ ನಡೆಸಲು ತಳಮಟ್ಟದಿಂದ ರಾಷ್ಟ್ರಮಟ್ಟದ ವರೆಗೆ ಕಾನೂನು ರೀತ್ಯ ಸೂಕ್ತ ರಕ್ಷಣೆ ನೀಡಬೇಕು, ಅತ್ಯಾಚಾರಿಗಳಿಗೆ ವಿಧಿಸುವ ಶಿಕ್ಷೆಯನ್ನು ಕಠಿಣ ಗೊಳಿಸಬೇಕು, ಈಗಿರುವ ಶಿಕ್ಷೆ ವಿಧಾನವನ್ನು ಬದಲಿಸಿ ಅತಿ ಶೀಘ್ರ ತೀರ್ಪು ನೀಡಿ ಅತ್ಯಾಚಾರಿಗಳ ದಮನಕ್ಕೆ ಮುಂದಾಗುವ ಮೂಲಕ ನಾಗರಿಕ ಸಮಾಜದಲ್ಲಿನ ವಿಕೃತ ಪುರುಷರಿಗೆ ಪಾಠ ಕಲಿಸಬೇಕು, ಶಾಸನ ಸಭೆಗಳಲ್ಲಿ ಮಹಿಳೆಯರ ದೌರ್ಜನ್ಯ ತಡೆಗೆ ಸಂಸದರು, ಶಾಸಕರು ದನಿಯತ್ತಬೇಕು, ಭ್ರೂಣಲಿಂಗ ಪತ್ತೆ ತಡೆಗೆ ಮುಂದಾಗಬೇಕು ಹೆಣ್ಣು ಭ್ರೂಣ ಹತ್ಯೆ ಮಾಡುವವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಮುಖಂಡರಾದ ಮೊಲಿ ಪುಡ್ತದೋ, ಭಾರತಿ,ಉಮಾ, ಶೃತಿ, ಪ್ರಕಾಶ್ ಮೇರಿ, ಸಾಕಮ್ಮ, ವರಲಕ್ಷ್ಮಿ, ವಿದ್ಯಾವತಿ ನೇತೃತ್ವ ವಹಿಸಿದ್ದರು.