ಮಂಡ್ಯ :- ಮುಖ್ಯಮಂತ್ರಿ ಸಿದ್ದರಾಮಯ್ಯರವರ ರಾಜಕಾರಣಕ್ಕೆ ಕಪ್ಪು ಚುಕ್ಕೆ ತಂದು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಮಂಡ್ಯದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ವನದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಕಪ್ಪು ಪಟ್ಟಿ ಕಟ್ಟಿಕೊಂಡು ಧರಣಿ ನಡೆಸಿ ಬಹುಮತದ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ವಿಚಾರವನ್ನು ನೆಪವಾಗಿಸಿಕೊಂಡು ಬಿಜೆಪಿ – ಜೆಡಿಎಸ್ ಮುಖ್ಯಮಂತ್ರಿ ಸಿದ್ದರಾಮಯ್ಯರ ಪರಿಶುದ್ಧ ರಾಜಕಾರಣಕ್ಕೆ ಕಪ್ಪು ಮಸಿ ಬಳಿಯಲು ಮುಂದಾಗಿದೆ, ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರು ನೀಡಿದ್ದ ಅಭಿಯೋಜನೆ ಆದೇಶವನ್ನು ಹೈಕೋರ್ಟ್ ನ ಏಕ ಸದಸ್ಯ ಪೀಠದಲ್ಲಿ ಪ್ರಶ್ನಿಸಲಾಗಿತ್ತು, ವಿಚಾರಣೆ ನಡೆಸಿದ ನ್ಯಾಯಾಲಯ 218 ಬಿಎನ್ ಎಸ್ ಎಸ್ ಅನ್ವಯ ರಾಜ್ಯಪಾಲರು ನೀಡಿದ್ದ ಅಭಿಯೋಜನಾ ಅನುಮತಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವುದು ಕಾನೂನು ಹೋರಾಟದಲ್ಲಿ ಸಿಕ್ಕಿರುವ ಮೊದಲ ಜಯವಾಗಿದೆ,
ದೂರುದಾರರು ಸಲ್ಲಿಸಿದ್ದ ದೂರಿನಲ್ಲಿ ಸೆಕ್ಷನ್ 218 ಬಿಎನ್ ಎಸ್ಎ ಎಸ್, 17 ಎ ಮತ್ತು 19 ಪಿಸಿ ಕಾಯಿದೆ ಪ್ರಕಾರ ತನಿಖೆ ಹಾಗೂ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದರು. ಆದರೆ, ರಾಜ್ಯಪಾಲರು 19 ಪಿಸಿ ಕಾಯಿದೆ ಅನ್ವಯ ಅನುಮತಿ ನಿರಾಕರಿಸಿದ್ಧರು ಆದರೆ ಸೆಕ್ಷನ್ 218 ಬಿಎನ್ ಎಸ್ಎ ಎಸ್, 17 ಎ ಅನ್ವಯ ಅಭಿಯೋಜನೆಗೆ ಅನುಮತಿ ನೀಡಿದ್ದರು ಇದೀಗ ನ್ಯಾಯಾಲಯ ಸೆಕ್ಷನ್ 218 ಬಿಎನ್ ಎಸ್ಎ ಎಸ್ ಅನ್ವಯದ ಅನುಮತಿಗೆ ಮನ್ನಣೆ ನೀಡಿಲ್ಲ,ಮುಂದಿನ ದಿನಗಳಲ್ಲಿ 17ಎ ಅನ್ವಯ ನೀಡಲಾಗಿರುವ ಅನುಮತಿ ಕೂಡ ರದ್ದಾಗಲಿದೆ ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮುಕ್ತರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಕಾರ್ಯಕರ್ತರು ಹಾಗೂ ಶಾಸಕರು ಸಿದ್ದರಾಮಯ್ಯರ ಪರ ಪ್ರಬಲವಾಗಿ ನಿಂತಿದ್ದು,ಬಿಜೆಪಿ, ಜೆಡಿಎಸ್ ನಾಯಕರ ಸೇಡಿನ ರಾಜಕೀಯದ ವಿರುದ್ಧ ಹೋರಾಟ ಮುಂದುವರಿಯಲಿದೆ. ಸಿದ್ದರಾಮಯ್ಯ ಬಡವರ ಪರ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಬಿಜೆಪಿ, ಜೆಡಿಎಸ್ ನಾಯಕರು ರಾಜಕೀಯ ಪ್ರತಿಕಾರಕ್ಕೆ ಮುಂದಾಗಿದ್ದಾರೆ,ಮುಡಾ ಪ್ರಕರಣ ನೆಪವಾಗಿಸಿಕೊಂಡು ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ, ರಾಜಭವನ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿದ್ದಾರೆ ಇವರ ಷಡ್ಯಂತ್ರ ಫಲಿಸುವುದಿಲ್ಲ, ಬಿಜೆಪಿ,ಜೆಡಿಎಸ್ ನಾಯಕರ ಬಣ್ಣ ಬಯಲಾಗಿ ಮುಖಭಂಗ ಅನುಭವಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ ಎಲ್ ಸುರೇಶ್, ಮಾಜಿ ಅಧ್ಯಕ್ಷ ಕೆ ಎಚ್ ನಾಗರಾಜ್,ಎಲ್ ಸಂದೇಶ್, ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಎಂ ಎಸ್ ಚಿದಂಬರ್, ಗುರು ಕುಮಾರ್,ವಿಜಯಲಕ್ಷ್ಮಿ ರಘುನಂದನ್, ತಗ್ಗಳ್ಳಿ ಯಶೋದ,ಸುಂಡಹಳ್ಳಿ ಮಂಜುನಾಥ್,ವಿಜಯ್ ಕುಮಾರ್,ಎಂ ಮಹೇಶ್,ದೊಡ್ಡಯ್ಯ, ಅಮ್ಜದ್ ಪಾಷಾ,ಅನುರಾಧ, ಎಂ.ಎಸ್ ರಾಜಣ್ಣ, ಸಿದ್ದರಾಜು ನೇತೃತ್ವ ವಹಿಸಿದ್ದರು.