ಮಂಡ್ಯ :- ರೈತರ ಕುಟುಂಬವನ್ನು ಸುಲಿಗೆ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕ್ರಮ ವಹಿಸಬೇಕು ಹಾಗೂ ಕಬ್ಬು ಬೆಳೆ ಕಟಾವು ವಿಳಂಬವಾಗುತ್ತಿರುವುದರಿಂದ ಬೇರೆ ಕಾರ್ಖಾನೆಗಳಿಗೆ ಸರಬರಾಜು ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ರೈತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದ ರೈತ ಕುಟುಂಬಗಳಿಗೆ ಸಾಲ ವಸೂಲಿ ವೇಳೆ ತೊಂದರೆ ನೀಡಲಾಗುತ್ತಿದೆ, ಸಾಲ ಮರುಪಾವತಿ ಕಂತನ್ನು ಪಾವತಿಸಲು ಒಂದು ದಿನ ವಿಳಂಬವಾದರೆ ಅದಕ್ಕೆ ದಿನದ ಬಡ್ಡಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕಲಾಗುತ್ತಿದೆ, ಇದರಿಂದ ಸಾಲಪಡೆದ ರೈತರಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಪರಿಶೀಲಿಸಿ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ರೈತ ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ರೈತರು ಬೆಳೆದಿರುವ ಕಬ್ಬನ್ನು 16 ರಿಂದ 18 ತಿಂಗಳು ಆಗಿದ್ದರೂ ಸಹ ಒಪ್ಪಿಗೆ ಪಡೆದಿರುವ ಸಕ್ಕರೆ ಕಾರ್ಖಾನೆಗಳು ನಿಗದಿತ ಸಮಯದಲ್ಲಿ ಕಬ್ಬು ಕಟಾವು ಮಾಡುತ್ತಿಲ್ಲ, ಕಾರ್ಖಾನೆಯಲ್ಲಿ ಯಂತ್ರೋಪಕರಣ ದುರಸ್ಥಿ ಹಾಗೂ ಆಳುಗಳ ಕೊರತೆ ಎಂಬ ಇಲ್ಲಸಲ್ಲದ ಸುಳ್ಳು ಮಾಹಿತಿ ನೀಡಿ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಹಾಗಾಗಿ ಬೇರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಶಿವಳ್ಳಿ, ಜಗದೀಶ್,ಎಂ ಕುಮಾರ, ಎಸ್ ಎನ್ ಸಿದ್ದೇಗೌಡ, ಹಲ್ಲೆಗೆರೆ ಶಿವರಾಮು,ಮಂಜೇಶ್ ಎಚ್ ಪಿ, ರಾಮಲಿಂಗೇಗೌಡ, ಹಲ್ಲೇಗೆರೆ ಹರೀಶ್ ನೇತೃತ್ವ ವಹಿಸಿದ್ದರು.