ಮಂಡ್ಯ :- ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಗುಣಮಟ್ಟದ ಸೇವೆ ಒದಗಿಸಲು ಮೊಬೈಲ್ ಸೇರಿದಂತೆ ಅಗತ್ಯ ಸಲಕರಣೆ, ಸೌಲಭ್ಯಗಳನ್ನು ಒದಗಿಸುವಂತೆ ಗ್ರಾಮ ಆಡಳಿತಾಧಿಕಾರಿಗಳು ಮಂಡ್ಯದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು,
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕರೆ ಮೇರೆಗೆ ಕರ್ತವ್ಯ ಬಹಿಷ್ಕರಿಸಿದ ಅಧಿಕಾರಿಗಳು ನಗರದ ತಾಲೂಕು ಕಚೇರಿ ಬಳಿ ಧರಣಿ ಆರಂಭಿಸುವ ಮೂಲಕ ಮುಷ್ಕರ ಬೆಂಬಲಿಸಿದರು
ಕಂದಾಯ ಇಲಾಖೆಯಿಂದ ಅಭಿವೃದ್ಧಿಪಡಿಸಿರುವ 17 ಕ್ಕೂ ಅಧಿಕ ಮೊಬೈಲ್ ಆಯಪ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹಾಕಲಾಗುತ್ತಿದೆ. ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್, ಲ್ಯಾಪ್‌ಟಾಪ್, ಇಂಟರ್‌ನೆಟ್ ಸಂಪರ್ಕ, ಸ್ಕ್ಯಾನರ್ ನೀಡದೆ ಕೆಲಸ ಮಾಡಿಸಲಾಗುತ್ತಿದೆ. ಇದರಿಂದ ಕರ್ತವ್ಯ ನಿರ್ವಹಿಸುವುದು ಕಷ್ಟಕರವಾಗಿದ್ದು,ಕೆಲಸ ನಿರ್ವಹಣೆಗೆ ಮೂಲಭೂತ ಸೌಲಭ್ಯಗಳ ಕೊರತೆಯೂ ಕಾಡುತ್ತಿದ್ದು, ಉತ್ತಮ ಗುಣಮಟ್ಟದ ಟೇಬಲ್, ಕುರ್ಚಿ, ಅಲ್ಮೇರಾ, ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನ್, ಸಿಯುಜಿ ಸಿಮ್, ಡೇಟಾ, ಪ್ರಿಂಟರ್, ಸ್ಕ್ಯಾನರ್ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಕಾಲಕ್ಕೆ ಪದೋನ್ನತಿ ಸಿಗುತ್ತಿಲ್ಲ. 30 ವರ್ಷಗಳಿಗೂ ಹೆಚ್ಚು ಸಮಯ ಕೆಲಸ ನಿರ್ವಹಿಸಿದರೂ ಬಡ್ತಿ ಸಿಗದಾಗಿದೆ. ರಾಜ್ಯದಲ್ಲಿ 1,196 ಗ್ರೇಡ್-1 ಗ್ರಾಮ ಪಂಚಾಯಿತಿ, 304 ಕಸಬಾ ಹೋಬಳಿ ವೃತ್ತಗಳನ್ನು ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ರಾಜಸ್ವ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಗ್ರೇಡ್-1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಪರಿಷ್ಕರಿಸಿ ಪದೋನ್ನತಿ ನೀಡಬೇಕು ಎಂದು ಒತ್ತಾಯಿಸಿದರು.
ಅಂತರ್ ಜಿಲ್ಲಾ ಪತಿ- ಪತ್ನಿ ಪ್ರಕರಣಗಳ ವರ್ಗಾವಣೆಗೆ ಚಾಲನೆ ನೀಡಬೇಕು. ಸರ್ಕಾರಿ ರಜಾ ದಿನಗಳಲ್ಲಿ ಕೆಲಸ ಮಾಡಿಸಬಾರದು. ಮೂರು ವರ್ಷಗಳ ಸೇವೆಯನ್ನು ಪರಿಗಣಿಸಿ ಅಂತರ ಜಿಲ್ಲಾ ವರ್ಗಾವಣೆಗೆ ಹೊಸ ಮಾರ್ಗಸೂಚಿ ರಚಿಸಬೇಕು. ಆಯುಕ್ತಾಲಯ ಮಟ್ಟದಲ್ಲಿನ ಜೇಷ್ಠತೆಯನ್ನು ರಾಜ್ಯ ಮಟ್ಟದ ಜೇಷ್ಠತೆಯನ್ನಾಗಿ ಪರಿಗಣಿಸಬೇಕು. ಮೊಬೈಲ್ ತಂತ್ರಾಂಶ ಬಳಸಿ ಕೆಲಸ ಮಾಡುವ ವಿಚಾರವಾಗಿ ಈವರೆಗೆ ಆಗಿರುವ ಗ್ರಾಮ ಆಡಳಿತ ಅಧಿಕಾರಿಗಳ ಅಮಾನತು ರದ್ದುಪಡಿಸಬೇಕು. ಪ್ರಯಾಣ ಭತ್ಯೆಯನ್ನು 500 ರಿಂದ 3 ಸಾವಿರಕ್ಕೆ ಹೆಚ್ಚಿಸಬೇಕು. ಅವಧಿಗೆ ಮುನ್ನ, ಕೆಲಸ ಮುಕ್ತಾಯದ ನಂತರ ವರ್ಚುವಲ್ ಸಭೆ ನಡೆಸಬಾರದು ಎಂದು ಮನವಿ ಮಾಡಿದರು.
ಜಿಲ್ಲಾ ಕಂದಾಯ ಇಲಾಖೆ ನೌಕರರ ಸಂಘ ಮುಷ್ಕರಕ್ಕೆ ಬಾಹ್ಯ ಬೆಂಬಲ ಸೂಚಿಸಿ ಸಂಘದ ಜಿಲ್ಲಾಧ್ಯಕ್ಷ ಡಿ. ತಮ್ಮಣ್ಣಗೌಡ ಮಾತನಾಡಿ ಕಂದಾಯ ಇಲಾಖೆಯಿಂದ ಬೆಳೆ ಸಮೀಕ್ಷೆ, ಬಗರ್ ಹುಕ್ಕುಂ, ಭೂಮಿ ಗುರುತು ಮಾಡುವುದು ಸೇರಿದಂತೆ ಸುಮಾರು 17 ಮೊಬೈಲ್ ಅಯಪ್ ಗಳ ಮೂಲಕ, ಕೆಲಸ ಮಾಡುವಂತೆ ಗ್ರಾಮ ಆಡಳಿತಾಧಿಕಾರಿಗಳಿಗೆ ಒತ್ತಡ ಹಾಕುತ್ತಿದೆ. ಆದರೆ ಮೊಬೈಲ್ ಆಯಪ್ ಕಾರ್ಯ ನಿರ್ವಹಣೆ ಮಾಡಲು ಅಗತ್ಯವಿರುವ ಅಧುನಿಕ ತಂತ್ರಜ್ಞಾನ ಒಳಗೊಂಡ ಮೊಬೈಲ್ , ಇಂಟರನೆಟ್ ಸೌಲಭ್ಯ, ಪ್ರಿಂಟರ್ ಸೇರದಂತೆ ಯಾವುದೇ ಪರಿಕರಗಳನ್ನು ನೀಡದೆ,ಕೆಲಸ ಮಾಡುವಂತೆ ಒತ್ತಡ ಹಾಕುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್, ಲ್ಯಾಪ್‌ಟಾಪ್, ಇಂಟರ್‌ನೆಟ್ ಹಾಗೂ ಸ್ಕ್ಯಾನರ್‌ಗಳನ್ನು ಒದಗಿಸದೇ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ .ಬೆಳಿಗ್ಗೆ 6 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಕೆಲಸ ನಿರ್ವಹಿಸುತ್ತಿದ್ದು, ಆದರೆ ಸರ್ಕಾರ ಯಾವುದೇ ರೀತಿಯ ಸೌಲಭ್ಯ ನೀಡುತ್ತಿಲ್ಲ ಆದ್ದರಿಂದ ಮುಷ್ಕರ ಕ್ಕೆ ಕರೆ ನೀಡಲಾಗಿದೆ ಎಂದು ಹೇಳಿದರು.
ಕಂದಾಯ ಇಲಾಖೆ ನೌಕರರ ಸಂಘದ ತಾಲೂಕು ಅಧ್ಯಕ್ಷ ವಿ.ವೆಂಕಟೇಶ್, ಖಜಾಂಚಿ ಎಸ್. ಮಹೇಶ್, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಕುಮಾರ್ ನೇತೃತ್ವ ವಹಿಸಿದ್ದರು.