ಮಂಡ್ಯ :- ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ನಿಯಮಾನುಸಾರ ನೇಮಕ ಮಾಡುವಾಗ ಷರತ್ತು ಪಾಲನೆಗೆ ಸರ್ಕಾರ ಹೊರಡಿಸಿರುವ ಸುತ್ತೋಲೆ ಮಾರ್ಪಾಡಿಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಮಿತಿಯ ಕಾರ್ಯಕರ್ತರು ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಪತ್ರ ರವಾನಿಸಿದರು.
ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ನಿಯಮ ಅನ್ವಯಿಸಿ ನೇಮಕ ಪ್ರಕ್ರಿಯೆ ನಡೆಸಲು ರಾಜ್ಯ ಸರ್ಕಾರ ಆದೇಶ ಮಾಡಿರುವುದು ಸ್ವಾಗತಾರ್ಹ, ಆದರೆ ಸುತ್ತೋಲೆಯಲ್ಲಿ ಮೀಸಲಾತಿ ನೀತಿಯು 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗಳಿಗೆ ಅನ್ವಯಿಸುವದಿಲ್ಲ ಹಾಗೂ ಯಾವುದೇ ಇಲಾಖೆಯಲ್ಲಿ ಕನಿಷ್ಠ 20 ಅಭ್ಯರ್ಥಿಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವಾಗ ಮಾತ್ರ ಮೀಸಲಾತಿ ನಿಯಮ ಜಾರಿಗೊಳಿಸತಕ್ಕದ್ದು ಎಂದು ಷರತ್ತು ಹಾಕಿರುವುದು ದುರುದ್ದೇಶ ಪ್ರೇರಿತ ಅವ್ಯೆಜ್ಞಾನಿಕ ವಾಗಿದ್ದು, ಅಷ್ಟೇ ಅಲ್ಲದೆ ಮೀಸಲಾತಿ ವಂಚಿಸಲು ಸಿದ್ಧ ಇರುವವರಿಗೆ ಸಹಕಾರಿ ಆಗಲಿದೆ ಎಂದು ಎಚ್ಚರಿಸಿದರು.
ಇದುವರೆಗಿನ ನೇಮಕಾತಿ ಪ್ರಕ್ರಿಯೆಗಳನ್ನು ಅವಲೋಕನ ಮಾಡಿದರೆ ಜಾತಿವಾದಿ ಅಧಿಕಾರಿಗಳ ಮೀಸಲಾತಿ ವಿರೋಧಿ ದುರಾಡಳಿತಕ್ಕೆ ಸಾಕಷ್ಟು ಪುರಾವೆ ಸಿಗಲಿದೆ, ಸಮಾಜದಲ್ಲಿ ಮೀಸಲಾತಿ ಬಗ್ಗೆ ಅಸಹನೆ ತುಂಬಿ ತುಳುಕುತ್ತಿರುವ ಹೊತ್ತಿನಲ್ಲಿ ಇಂತಹ ಷರತ್ತು ಬದ್ದ ಆದೇಶ ಪಕ್ಷಪಾತ ಮಾಡುವ ಜಾತಿವಾದಿ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸುತ್ತೋಲೆಯಲ್ಲಿ ಹೊರಡಿಸಿರುವ ಷರತ್ವಗಳನ್ನು ರದ್ದು ಮಾಡಬೇಕು, ಸರ್ಕಾರಿ ಇಲಾಖೆಗಳಲ್ಲಿ ಎಷ್ಟೇ ಅವಧಿಯ ನೇಮಕಾತಿ ಮಾಡಿಕೊಂಡರೂ ಮೀಸಲಾತಿ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಆದೇಶಿಸಬೇಕು, ಹುದ್ದೆಗಳ ಸಂಖ್ಯೆ ಎಷ್ಟೇ ಇರಲಿ ಎಷ್ಟೇ ಅವಧಿಯದ್ದಾಗಿರಲಿ ರೋಸ್ಟರ್ ನಿಯಮದ ಅನುಸಾರ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಸರ್ಕಾರ ಮರು ಸುತ್ತೋಲೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಪ್ರೊ. ಹುಲ್ಕೆರೆ ಮಹದೇವ್. ಜಿ. ಬೋರಯ್ಯ, ಗಂಜಾಂ ರವಿಚಂದ್ರ, ವೈ.ರಾಜಶೇಖರ, ರಾಮಂದೂರು ಸಿದ್ದರಾಜು, ಕೆ ನಿಂಗರಾಜು ನೇತೃತ್ವ ವಹಿಸಿದ್ದರು.