ಮಂಡ್ಯ :- ರೈತರ ಜೀವನಾಡಿ ಕೃಷ್ಣರಾಜಸಾಗರ ಆಷಾಢ ಮಾಸದಲ್ಲೇ ಭರ್ತಿಯಾಗಿದ್ದು ರೈತರಲ್ಲಿ ಸಂಭ್ರಮ ಮಾಡಿರುವ ಬೆನ್ನಲ್ಲೇ ಕಾವೇರಿ ಮಾತೆಗೆ ಬಾಗಿನ ಅರ್ಪಿಸಲು ಸಿದ್ಧತೆ ನಡೆದಿದೆ.
ಕೆ ಆರ್ ಎಸ್ ನಲ್ಲಿ ನೀರಿನ ಮಟ್ಟ ಗರಿಷ್ಠ ಹಂತಕ್ಕೆ ತಲುಪಲು ಒಂದು ಅಡಿ ಬಾಕಿ ಇದ್ದು, ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ, ಯಾವುದೇ ಕ್ಷಣದಲ್ಲಿ ಕೃಷ್ಣರಾಜಸಾಗರ ಸಂಪೂರ್ಣ ಭರ್ತಿಯಾಗಲಿದೆ.
124.80 ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ 123.20 ಅಡಿ ನೀರು ಸಂಗ್ರಹವಾಗಿದ್ದು, 60016 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 52020 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗಿದೆ.
ಕೆ ಆರ್ ಎಸ್ 49452 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಇದೀಗ 47242 ಟಿಎಂಸಿ ನೀರು ಸಂಗ್ರಹ ವಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಕಳೆದ ವರ್ಷ ಜಲಾಶಯ ಭರ್ತಿಯಾಗಿರಲಿಲ್ಲ, ಬರಗಾಲದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು, ಆದರೆ ಈ ಬಾರಿ ಜಲಾಶಯ ಭರ್ತಿಯಾಗಿರುವುದು ಎಲ್ಲರಲ್ಲೂ ಸಂಭ್ರಮ ತಂದಿದ್ದು ಸರ್ಕಾರ ಸಹ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಲು ಉತ್ಸಾಹ ತೋರಿದೆ.
ಶಾಸಕ ರಮೇಶ್ ಬಾಬು ಬಂಡಿ ಸಿದ್ದೇಗೌಡ ಕೆ ಆರ್ ಎಸ್ ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಜು 27 ಚಾಮುಂಡೇಶ್ವರಿ ವರ್ದಂತೋತ್ಸವ ದಿನದಂದು ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಿದ್ದಾರೆ ಎಂದಿದ್ದರು.
ಇದರ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಸೋಮವಾರ ಬೆಳ್ಳಂ ಬೆಳಗ್ಗೆ ಕೃಷ್ಣರಾಜಸಾಗರಕ್ಕೆ ಭೇಟಿ ನೀಡಿ ಬಾಗಿನ ಸಮರ್ಪಣೆ ಸಿದ್ಧತೆಗೆ ಅಧಿಕಾರಿಗಳ ಜೊತೆ ಸಮಾಲೋಚಿಸಿದ್ದಾರೆ.