ಮಂಡ್ಯ :-ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಾನಿಕ ವೈದ್ಯರ ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹಿಸಿ ಸ್ಥಾನಿಕ ವೈದ್ಯರ ಪ್ರತಿಭಟನೆ ಮಂಡ್ಯದಲ್ಲಿ ಎರಡನೇ ದಿನವೂ ಮುಂದುವರೆಯಿತು.
ನಗರದ ಮಿಮ್ಸ್ ಆವರಣದಲ್ಲಿ ಸ್ಥಾನಿಕ ವೈದ್ಯರು ಮೌನ ಪ್ರತಿಭಟನೆ ಮುಂದುವರೆಸಿದ್ದು, ವೈದ್ಯರ ಮುಷ್ಕರದಿಂದ ಆರೋಗ್ಯ ಸೇವೆಯಲ್ಲಿ ವ್ಯತಯ ಉಂಟಾಯಿತು.
2020ರಲ್ಲಿ ಶಿಷ್ಯ ವೇತನ ಹೆಚ್ಚಳ ಮಾಡಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಶಿಷ್ಯ ವೇತನ ಹೆಚ್ಚಳ ಮಾಡಿಲ್ಲ. ಇತರ ರಾಜ್ಯಗಳು ಪ್ರತಿ ವರ್ಷ ಅಥವಾ ಪ್ರತಿ ಮೂರು ವರ್ಷಗಳಿಗೊಮ್ಮೆ ಶಿಷ್ಯ ವೇತನ ಹೆಚ್ಚಳ ಮಾಡುತ್ತವೆ. ನಾವು ವಿರಾಮವಿಲ್ಲದೆ ಕೆಲಸ ಮಾಡುತ್ತಿದ್ದೇವೆ. ಆದರೂ ನ್ಯಾಯಯುತವಾಗಿ ನಮಗೆ ಶಿಷ್ಯ ವೇತನ ಸಿಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶಿಷ್ಯವೇತನ ಹೆಚ್ಚಳಕ್ಕಾಗಿ ಸರ್ಕಾರಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಿದ್ದೇವೆ ಮತ್ತು ಅಧಿಕಾರಿಗಳೊಂದಿಗೆ ಸಭೆ ಮಾಡಿದ್ದೇವೆ. ಆದರೆ ಶಿಷ್ಯ ವೇತನ ಹೆಚ್ಚಳಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಸ್ಥಾನಿಕ ವೈದ್ಯರನ್ನು ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಒತ್ತಡಕ್ಕೆ ಸಿಲುಕಿಸಿದೆ. ಇದರಿಂದ ರೋಗಿಗಳ ಆರೈಕೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ ಎಂದರು.
ಕರ್ನಾಟಕದ ವೈದ್ಯರು ಇತರ ರಾಜ್ಯಗಳಲ್ಲಿನ ವೈದ್ಯರಿಗಿಂತ ಶೇ.50 ರಷ್ಟು ಕಡಿಮೆ ಶಿಷ್ಯ ವೇತನ ಪಡೆಯುತ್ತಾರೆ. ಆದರೆ ನಾವು ಪದವಿಪೂರ್ವ, ಸ್ನಾತಕೋತ್ತರ ಮತ್ತು ಸೂಪರ್-ಸ್ಪೆಷಾಲಿಟಿ ವೈದ್ಯಕೀಯ ಕೋರ್ಸ್‌ಗಳಿಗೆ ದೇಶದಲ್ಲೇ ಅತಿ ಹೆಚ್ಚಿನ ಶುಲ್ಕವನ್ನು ಪಾವತಿಸುತ್ತೇವೆ. ಇತರ ರಾಜ್ಯಗಳ ಸ್ಥಾನಿಕ ವೈದ್ಯರಿಗೆ ನೀಡುತ್ತಿರುವ ಶಿಷ್ಯ ವೇತನಕ್ಕೂ ಕರ್ನಾಟಕದಲ್ಲಿ ನೀಡುತ್ತಿರುವ ಶಿಷ್ಯ ವೇತನಕ್ಕೂ ವ್ಯತ್ಯಾಸವಿದೆ. ಆದ್ದರಿಂದ ಇತರೆ ರಾಜ್ಯಗಳಿಗೆ ಸರಿಸಮನಾಗಿ ಶಿಷ್ಯ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಸ್ಥಾನಿಕ ವೈದ್ಯರ ಪ್ರತಿಭಟನೆಗೆ ಕರ್ನಾಟಕ ರಾಜ್ಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ ಸಂಘ ಬೆಂಬಲ ಸೂಚಿಸಿತು,
ಸಂಘದ ಕಾರ್ಯದರ್ಶಿ ಯೋಗೇಂದ್ರ ಕುಮಾರ್ ಮಾತನಾಡಿ ಸ್ಥಾನೀಯ ವೈದ್ಯರು ಶಿಷ್ಯ ವೇತನ ಹೆಚ್ಚಿಸುವಂತೆ ನಡೆಸುತ್ತಿರುವ ಪ್ರತಿಭಟನೆ ನ್ಯಾಯಯುತವಾಗಿದ್ದು ಆಸ್ಪತ್ರೆಗಳಲ್ಲಿ ಬೇಸಿಕ್ ಪಿಲ್ಲರ್ ಗಳಾಗಿ ಕೆಲಸ ನಿರ್ವಹಿಸುವ ಸ್ಥಾನೀಯ ವೈದ್ಯರ ಮನವಿಗೆ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್ ಸ್ಪಂದಿಸಬೇಕು, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಹಾಗೂ ಶಾಸಕ ರವಿಕುಮಾರ್ ಗಣಿಗ ಕಿರಿಯ ಸ್ಥಾನೀಯ ವೈದ್ಯರ ಮನವಿಯನ್ನು ಸಕರಾತ್ಮಕವಾಗಿ ಸ್ಪಂದಿಸಬೇಕೆಂದು ಮನವಿ ಮಾಡಿದರು.
ವೈದ್ಯರಾದ ರವಿಕಿರಣ್, ಮೇರಿನ್ ಜೋಸೆಫ್, ಬಸವಲಿಂಗ, ಚಂದ್ರಶೇಖರ್, ಪ್ರಿಯಾಂಕ ಇತರರಿದ್ದರು.