18.4 C
New York
Monday, September 16, 2024

Buy now

spot_img

ಬಿಜೆಪಿ,ಜೆಡಿಎಸ್ ನಾಯಕರ ಭ್ರಷ್ಟಾಚಾರ ಬಯಲು : ಸಚಿವ ಚೆಲುವರಾಯಸ್ವಾಮಿ

ಮಂಡ್ಯ :- ಜನಪರ ಕೆಲಸ ಮಾಡುತ್ತಾ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಚು ರೂಪಿಸಿ ಹಗರಣವಲ್ಲದ ವಿಚಾರವನ್ನು ಮುಂದೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ಹೂಡಿರುವ ಬಿಜೆಪಿ – ಜೆಡಿಎಸ್ ನಾಯಕರ ಎಲ್ಲಾ ಹಗರಣವನ್ನು ಕಾನೂನು ಬದ್ಧವಾಗಿ ಬಯಲು ಮಾಡಲಾಗುವುದು ಎಂದು ಕೃಷಿ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದರು.
ನಗರದ ಸರ್ ಎಂ ವಿ ಪ್ರತಿಮೆ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಧೋರಣೆ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿದ ಅವರು ಬಿಜೆಪಿ – ಜೆಡಿಎಸ್ ಅಧಿಕಾರದಲ್ಲಿದ್ದಾಗ ನಡೆದಿರುವ ಹಗರಣವನ್ನು ಬಯಲು ಮಾಡಲು ಡೂಪ್ಲಿಕೇಟ್ ದೂರು ಕೊಡಲ್ಲ, ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ ಬದಲಾಗಿ ನ್ಯಾಯಯುತ ಮಾರ್ಗದಲ್ಲಿ ಮುನ್ನಡೆದು ಆ ಪಕ್ಷದ ನಾಯಕರುಗಳು ಮಾಡಿರುವ ಹಗರಣಗಳನ್ನು ಬಯಲು ಮಾಡಲಿದ್ದೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದದ್ದು ಬಿಜೆಪಿ – ಜೆಡಿಎಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿ ನೆಮ್ಮದಿ ಕೆಡಿಸಿದೆ, ಸಂಸತ್ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನ ಗೆದ್ದದ್ದು, ಇಂಡಿಯಾ ಒಕ್ಕೂಟ 200 ರ ಗಡಿ ದಾಟಿದ್ದರಿಂದ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ದೇಶದ ಚುಕ್ಕಾಣಿ ಹಿಡಿಯಬಹುದು ಇದಕ್ಕೆ ಕಾಂಗ್ರೆಸ್ ಬಲಿಷ್ಠವಾಗಿರುವ ಕರ್ನಾಟಕ ಭದ್ರಬುನಾದಿ ಯಾಗಬಹುದು ಎಂಬ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವವವರು ಇಲ್ಲಿನ ಸರ್ಕಾರದ ನಿದ್ದೆಗೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಅದೇ ರೀತಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಅಭಿವೃದ್ಧಿಪರ ಮುನ್ನಡೆದು ಅಭಿವೃದ್ಧಿಯ ಜೊತೆಗೆ ಜನರನ್ನು ಆರ್ಥಿಕವಾಗಿ ಬಲಪಡಿಸುತ್ತಿರುವುದನ್ನು ಸಹಿಸುತ್ತಿಲ್ಲ ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ನ್ಯಾಯತವಾಗಿ ಸಲ್ಲಬೇಕಾಗಿದ್ದ ಅನುದಾನವನ್ನು ನೀಡದೇ ಇದ್ದಾಗ ಮುಖ್ಯಮಂತ್ರಿಯಾದಿಯಾಗಿ ಸಚಿವರು ಮತ್ತು ಶಾಸಕರು ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತ್ತು ಮುಂದಿನ ದಿನಗಳಲ್ಲಿ ಬೇರೆ ರಾಜ್ಯಗಳು ಕೇಂದ್ರ ಸರ್ಕಾರದ ಕುತ್ತಿಗೆಗೆ ಕೈಹಿಡಿಯಬಹುದು ಎಂಬ ಭಯದಿಂದ ಕರ್ನಾಟಕ ಸರ್ಕಾರವನ್ನ ಅಸ್ಥಿರಗೊಳಿಸಲು ಬಿಜೆಪಿ ಮುಂದಾಗಿದೆ ಎಂದು ತಿಳಿಸಿದರು.
ಜಾತ್ಯಾತೀತ ಜನತಾದಳದ ನಾಯಕರು ಯಾರನ್ನು ಸಹಿಸುವುದಿಲ್ಲ, ಅವರಿಗೆ ಪ್ರತಿನಿತ್ಯ ರಾಜಕೀಯ ಎದುರಾಳಿಗಳನ್ನು ಯಾವ ರೀತಿ ಮುಗಿಸಬೇಕು ಎಂಬ ಕುತಂತ್ರದಲ್ಲಿ ನಿರತರಾಗಿರುತ್ತಾರೆ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಎಚ್ ಡಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ ಜನರ ಸಮಸ್ಯೆ ಯತ್ತ ಮುಖ ಮಾಡದೆ ಇನ್ನೊಬ್ಬರನ್ನು ನಾಶ ಮಾಡುವ, ಹಾಳು ಮಾಡುವ ಮಾರ್ಗದಲ್ಲಿ ಸಾಗಿ ಸಾಂವಿಧಾನಿಕ ರಾಜ್ಯಪಾಲರ ಹುದ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ನಾಚಿಕೆ ಆಗಲ್ಲವೆ, ಸಂವಿಧಾನ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ನಾಚಿಕೆ ಯಾಗ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಂತಕಲ್ ಮೈನಿಂಗ್ ಹಗರಣದ ವಿಚಾರವಾಗಿ ಲೋಕಾಯುಕ್ತ ತನಿಖೆ ನಡೆಸಿ ವರದಿ ನೀಡಿದ್ದು, ಎಚ್ ಡಿ ಕುಮಾರಸ್ವಾಮಿ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲು ರಾಜ್ಯಪಾಲರ ಅನುಮತಿ ಕೋರಿದೆ ಆದರೆ ಇದರ ಬಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಯಾವುದೇ ಕ್ರಮ ಕೈಗೊಂಡಿಲ್ಲ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಹಾಗೂ ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣ ಕುರಿತು ಪ್ರಾಷಿಕ್ಯೂ ಷನ್ ಗೆ ಅನುಮತಿ ನೀಡಲು ಮುಂದಾಗಬೇಕು, ಬಿಜೆಪಿ – ಜೆಡಿಎಸ್ ನಾಯಕರ ಒತ್ತಡಕ್ಕೆ ಮಾಡಿದ ಸಂವಿಧಾನ ಪೀಠ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ರಾಜ್ಯಪಾಲರನ್ನ ಎಚ್ಚರಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಪಡೆದಿರುವುದು ಹಗರಣ ವಲ್ಲ, ಇದೊಂದು ವಿಚಾರ ಅಷ್ಟೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಕಾನೂನು ಪ್ರಕಾರ ಅರ್ಜಿ ಸಲ್ಲಿಸಿ ನಿವೇಶನ ಕೋರಿದ್ದಾರೆ, ಅದರಂತೆ ನಿವೇಶನ ಮಂಜೂರಾಗಿದೆ, ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕಾನೂನು ಬದ್ಧವಾಗಿ ಇರದಿದ್ದರೆ ತಿರಸ್ಕಾರ ಮಾಡಬಹುದಿತ್ತು, ಇದನ್ನು ನೋಡಿದರೆ ಆಗ ಮುಖ್ಯಮಂತ್ರಿ ಆಗಿದ್ದ ಬಸವರಾಜ್ ಬೊಮ್ಮಾಯಿ ಮತ್ತು ಮೂಡಾ ಅಧ್ಯಕ್ಷರಾಗಿದ್ದವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜನಪರ ಕೆಲಸಕ್ಕೆ ಮೊದಲ ಆದ್ಯತೆ ನೀಡಿತು, ಹಾಗಾಗಿ ಬಿಜೆಪಿ ಜೆಡಿಎಸ್ ನಾಯಕರ ಭ್ರಷ್ಟಾಚಾರದ ಬಗ್ಗೆ ಗಮನಹರಿಸಲಿಲ್ಲ ಇದು ನಾವು ಮಾಡಿರುವ ತಪ್ಪಾಗಿರಬಹುದು, ಜನಪರ ಕೆಲಸ ಮಾಡದ ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಕಳುಹಿಸದೆ ಇದ್ದದ್ದು ತಪ್ಪಾಗಿದೆ ಈ ಕೆಲಸವನ್ನು ಮುಂದೆ ಮಾಡೋಣ ಎಂದು ಹೇಳುವ ಮೂಲಕ ಟೀಕಾ ಕಾರರಿಗೆ ತಿರುಗೇಟು ನೀಡಿದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುತ್ತಿರುವವರು, ಅವರ ತಪ್ಪನ್ನು ಪ್ರಶ್ನೆ ಸುತ್ತಿರುವವರು ಸಿದ್ದರಾಮಯ್ಯ ಎಂಬ ಹಿನ್ನೆಲೆಯಲ್ಲಿ ಅವರಿಗೆ ಕಳಂಕ ಹಚ್ಚಲು ಮುಂದಾಗಿದ್ದಾರೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಅಸ್ತಿರಗೊಳಿಸಲು ಸಾಧ್ಯವಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಕ್ಕೆ ಎ ಐ ಸಿ ಸಿ ಮತ್ತು ಕೆಪಿಸಿಸಿ, 136 ಶಾಸಕರು ಜೊತೆಗೆ ನಾಡಿನ ಜನತೆ ಅವರ ಜೊತೆ ಗಟ್ಟಿಯಾಗಿ ನಿಂತಿದ್ದಾರೆ ಎಂದು ಹೇಳಿದರು.

 

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles