ಮಂಡ್ಯ :- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವ್ಯಾಪ್ತಿಯ ಎಂಎಸ್ ಪಿಪಿಸಿ ಮಹಿಳಾ ಮತ್ತು ಮಕ್ಕಳ ಪೂರಕ ಪೌಷ್ಠಿಕ ಆಹಾರ ಕೇಂದ್ರದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ಮಾಡುವಂತೆ ಕೋರಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಡಾ.ಕುಮಾರರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರನ್ನ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ವೇದಿಕೆ ಕಾರ್ಯಕರ್ತರು ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಪೂರಕ ಪೌಷ್ಠಿಕ ಆಹಾರ ತಯಾರು ಮಾಡಿ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿರುವ ಎಂ.ಎಸ್.ಪಿ.ಪಿ.ಸಿ. ಮಹಿಳಾ ಮತ್ತು ಮಕ್ಕಳ ಪೂರಕ ಪೌಷ್ಠಿಕ ಆಹಾರ ತಯಾರಿಕ ಕೇಂದ್ರದಲ್ಲಿ ನಡೆದಿರುವ ಅಅವ್ಯವಹಾರ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದರು.
ಸರ್ಕಾರದಿಂದ ಮಹಿಳೆಯರು ಮತ್ತು ಮಕ್ಕಳಿಗಾಗಿ ಸರಬರಾಜಾಗಿರುವ ಅಕ್ಕಿ ಮತ್ತು ಗೋಧಿಯಲ್ಲಿ ಅವ್ಯವಹಾರ ನಡೆದಿರುತ್ತದೆ ಇಲ್ಲಿನ ಅಧಿಕಾರಿಗಳು ಮತ್ತು ಸರಬರಾಜುದಾರರು ಬಾಗಿಯಾಗಿದ್ದಾರೆ ಎಂಬ ಅನುಮಾನಕ್ಕೆ ಅವಕಾಶ ಮಾಡಿರುತ್ತದೆ ಎಂದು ತಿಳಿಸಿದ್ದಾರೆ.
ಎಂ.ಎಸ್.ಪಿ.ಪಿ.ಸಿ. ಪೌಷ್ಠಿಕ ಆಹಾರ ಕೇಂದ್ರಕ್ಕೆ ಟೆಂಡರ್ ಪಡೆದು ಸರಬರಾಜು ಮಾಡುತ್ತಿರುವ ಆಹಾರ ಪದಾರ್ಥಗಳಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತಿಲ್ಲ,ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿರುವ ತಯಾರಿಕ ಕೇಂದ್ರದಲ್ಲಿ ಗುಣಮಟ್ಟದ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ಸ್ವಚ್ಛಗೊಳಿಸಿ (ಕ್ಲೀನಿಂಗ್) ಪ್ಯಾಕೆಟ್ ಮಾಡಿ ಆಹಾರ ಪದಾರ್ಥಗಳನ್ನು ಅಂಗನವಾಡಿಗಳಿಗೆ ಸರಬರಾಜು ಮಾಡುತ್ತಿಲ್ಲ ಈ ಕೇಂದ್ರದಿಂದ ಪ್ಯಾಕೆಟ್ ಹಾಗೂ ಆಹಾರ ಪದಾರ್ಥಗಳಲ್ಲಿ ತೂಕದ ಪ್ರಮಾಣವು ಸರ್ಕಾರ ನಿಗಧಿಪಡಿಸಿರುವ ತೂಕದಂತಿರು ವುದಿಲ್ಲ ಎಂದು ದೂರಿದರು.
ಮಳವಳ್ಳಿ ತಾಲ್ಲೂಕಿನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರನ್ನ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಭೇಟಿ ಮಾಡಿ ಭಾವ ಚಿತ್ರಗಳನ್ನು ತೋರಿಸಿ ಮೌಖಿಕವಾಗಿ ಇದಕ್ಕೆ ಸಂಬಂಧಿಸಿದ ಎಲ್ಲಾ ವಿಚಾರವನ್ನು ತಿಳಿಸಿರುತ್ತಾರೆ. ಆದರೂ ಏನು ಕ್ರಮ ಕೈಗೊಂಡಿಲ್ಲ.
ಮಕ್ಕಳಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಪೌಷ್ಠಿಕ ಆಹಾರ ಪದಾರ್ಥಗಳನ್ನು ನೀಡುವಂತೆ ಆದೇಶ ಮಾಡಿದ್ದರು. ಇಲ್ಲಿರುವ ಎಂ.ಎಸ್.ಪಿ.ಪಿ.ಸಿ. ಕೇಂದ್ರ ಮತ್ತು ಶಿಶು ಅಭಿವೃದ್ಧಿ ಯೋಜನಾ ಕಛೇರಿಯ ಅಧಿಕಾರಿಗಳು ಶಾಮೀಲಾಗಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡುತ್ತಿಲ್ಲ ಭ್ರಷ್ಟ ಅಧಿಕಾರಿಗಳು ಹಾಗೂ ಸರಬರಾಜುದಾರರ ವಿರುದ್ದ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ವೇದಿಕೆಯ ರಾಜ್ಯ ಸಮಿತಿ ಸದಸ್ಯ ಮ.ಸೋ. ಚಿದಂಬರ್,ಜಿಲ್ಲಾಧ್ಯಕ್ಷ ವೇಣು.ಡಿ,
ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷ ಶ್ರೀನಿವಾಸ್,ಉಪಾಧ್ಯಕ್ಷ ಸ್ವಾಮಿ,ಮಳವಳ್ಳಿ ತಾಲ್ಲೂಕು ಅಧ್ಯಕ್ಷ ಅಪ್ಪೇಗೌಡ ಇತರರಿದ್ದರು.