ಮದ್ದೂರು :- ಕಬ್ಬು ಕಟಾವು ವಿಳಂಬ ಮಾಡುತ್ತಿರುವ ಕೊಪ್ಪ ಎನ್ ಎಸ್ ಎಲ್ ಕಾರ್ಖಾನೆಯ ಅಧಿಕಾರಿಗಳ ವಿರುದ್ಧ ತಾಲೂಕಿನ ಬೆಕ್ಕಳೆಲೆಯಲ್ಲಿ ರೈತರು ಪ್ರತಿಭಟನೆ ನಡೆಸಿದರು..
ಕಾರ್ಖಾನೆ ವ್ಯಾಪ್ತಿಯಲ್ಲದ ಹೊರ ಪ್ರದೇಶದಿಂದ ಕಬ್ಬು ತುಂಬಿಕೊಂಡು ಕಾರ್ಖಾನೆಗೆ ತೆರಳುತ್ತಿದ್ದ ಲಾರಿಗಳನ್ನು ತಡೆದು ಅಧಿಕಾರಿಗಳ ವಿರುದ್ಧ ಆಕ್ರೋಶಿಸಿದರು.
ಕೊಪ್ಪದ ಎನ್ ಎಸ್ ಎಲ್ ಕಾರ್ಖಾನೆಗೆ ಸುತ್ತಮುತ್ತಲ ಪ್ರದೇಶದ ಸಾವಿರಾರು ಎಕ್ಕರೆಯಲ್ಲಿ ಬೆಳೆದಿರುವ ಕಬ್ಬನ್ನು ಒಪ್ಪಿಗೆ ಮಾಡಿಕೊಂಡಿದ್ದು, ಆದರೆ ನಿಗದಿತ ಅವಧಿಯಲ್ಲಿ ಕಬ್ಬು ಕಟಾವು ಮಾಡದೆ ಇರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ, ಈಗಾಗಲೇ ಬೆಳೆದ ನಿಂತಿರುವ ಕಬ್ಬಿಗೆ 15 ರಿಂದ 18 ತಿಂಗಳು ಆಗಿದ್ದು ಮತ್ತಷ್ಟು ವಿಳಂಬವಾದರೆ ತೂಕ ಕಡಿಮೆಯಾಗಿ ರೈತರಿಗೆ ನಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಖಾನೆ ವ್ಯಾಪ್ತಿಯಲ್ಲಿ ಐದರಿಂದ ಆರು ಸಾವಿರ ಟನ್ ಕಬ್ಬನ್ನು ಕಟಾವು ಮಾಡದೆ ವಿಳಂಬ ಮಾಡುತ್ತಿದ್ದಾರೆ, 15 ದಿನಗಳ ಹಿಂದೆ ಸಹಾಯಕ ಜನರಲ್ ಮ್ಯಾನೇಜರ್ ರನ್ನು ಭೇಟಿಯಾಗಿ ಕಬ್ಬು ಕಡಿಯದಿರುವ ಬಗ್ಗೆ ರೈತರು ಕಿಡಿಕಾರಿದ್ದರು, ರೈತರನ್ನು ಸಮಾಧಾನಿಸಿದ ಅವರು ಕಬ್ಬು ಕಟಾವು ಮಾಡುವವರು ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ತೆರಳಿದ್ದಾರೆ, ಆ ಭಾಗದಲ್ಲಿಯೂ ಸಕ್ಕರೆ ಕಾರ್ಖಾನೆಗಳು ಆರಂಭವಾಗಿರುವುದರಿಂದ ಈ ಪ್ರದೇಶದಲ್ಲಿ ಆಳುಗಳ ಕೊರತೆ ಎದುರಾಗಿದೆ, ಆಂಧ್ರಪ್ರದೇಶ ತಮಿಳುನಾಡು ರಾಜ್ಯದ ಕಬ್ಬು ಕಟಾವು ಮಾಡುವವರನ್ನು ಸಂಪರ್ಕಿಸಿ ಕರೆ ತರಲಾಗುವುದು ಅಲ್ಲಿಯವರೆಗೆ ಅವಕಾಶ ಮಾಡಿಕೊಡಿ ಎಂದು ಭರವಸೆ ನೀಡಿದ್ದರು ಆದರೆ ಇದುವರೆಗೂ ಕಬ್ಬು ಕಟಾವು ಮಾಡಿಸದೆ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ ಎಂದು ಹೇಳಿದರು.
ಕಾರ್ಖಾನೆ ವ್ಯಾಪ್ತಿಯ ಒಪ್ಪಿಗೆ ಕಬ್ಬನ್ನು ಕಟಾವು ಮಾಡಿಸದೆ ಇರುವುದರಿಂದ ಕಾರ್ಖಾನೆಯಲ್ಲಿ ಅರೆಯಲು ಕಬ್ಬಿನ ಕೊರತೆ ಎದುರಾಗಿದೆ, ಆದರೂ ಸಹ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಗೌರಿಬಿದನೂರು ಹಾಗೂ ತಮಿಳುನಾಡು ಪ್ರದೇಶದಿಂದ ಕಬ್ಬನ್ನು ತರಿಸಿಕೊಳ್ಳುತ್ತಿದ್ದಾರೆ, ಪ್ರತಿನಿತ್ಯ ಆ ಭಾಗದಿಂದ ಕಬ್ಬು ತುಂಬಿಕೊಂಡು ಲಾರಿಗಳು ಬರುತ್ತಿವೆ, ಆದರೆ ಇಲ್ಲಿನ ರೈತರ ಕಬ್ಬು ಜಮೀನಿನಲ್ಲಿ ಒಣಗುತ್ತಿವೆ, ಆದಷ್ಟು ಶೀಘ್ರ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆಯನ್ನು ಸ್ಥಗಿತ ಮಾಡುವುದಾಗಿ ಹೇಳುತ್ತಿದ್ದು,ಹಾಗಾದರೆ ಒಪ್ಪಿಗೆ ಕಬ್ಬಿನ ಗತಿ ಏನು ಎಂದು ಪ್ರಶ್ನಿಸಿದರು.
ಈಗಾಗಲೇ ಬೆಳೆದು ನಿಂತಿರುವ ಕಬ್ಬನ್ನು ಬೇರೆ ಕಾರ್ಖಾನೆಗೆ ಸಾಗಾಣಿಕೆ ಮಾಡಲು ಅವಕಾಶ ಇಲ್ಲ, ಆಲೆಮನೆಯವರು ಕಬ್ಬನ್ನು ಖರೀದಿ ಮಾಡುತ್ತಿಲ್ಲ, ಕಾರ್ಖಾನೆ ಆಡಳಿತ ಮಂಡಳಿಯ ನಿರ್ಲಕ್ಷ್ಯತೆ ಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ, ಆದಷ್ಟು ತುರ್ತಾಗಿ ಕಬ್ಬು ಕಟ್ಟಲು ಮಾಡಬೇಕು ಇಲ್ಲದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಘು, ಪ್ರಮೋದ್, ರಾಜು,ಹರೀಶ್, ಪ್ರಕಾಶ್, ಕೃಷ್ಣ, ಗಿರೀಶ್ ಪಟೇಲ್, ಶಾಂತಮ್ಮ ಇತರರಿದ್ದರು.