ಮಂಡ್ಯ: ಬೂದನೂರು ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ್ದ ಮಹಿಳಾ ಗ್ರಾಮಸಭೆಗೆ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಬಾರದ ಕಾರಣ ಶಿಶು ಅಭಿವೃದ್ಧಿ ಅಧಿಕಾರಿ ಹಾಗೂ ವಿಶೇಷ ನೋಡೆಲ್ ಅಧಿಕಾರಿ ಎಂ.ಕೆ.ಕುಮಾರಸ್ವಾಮಿ ಸಭೆಯನ್ನು ಮುಂದೂಡಿಕೆ ಮಾಡಿದರು.
ಹಳೇ ಬೂದನೂರಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆ ಆಯೋಜಿಸಲಾಗಿತ್ತು ಆದರೆ ಗ್ರಾಪಂ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಮಕ್ಕಳ ಗ್ರಾಮಸಭೆ ನಡೆಸಲು ಕೆಲವರು ಅಕ್ಷೇಪ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯನ್ನು ಒಂದೇ ವೇದಿಕೆಯಲ್ಲಿ ಆಯೋಜಿಸಿರುವ ಬಗ್ಗೆ ಮಹಿಳೆಯರು ವಿರೋಧ ವ್ಯಕ್ತಪಡಿಸಿದಾಗ ಮಕ್ಕಳ ಗ್ರಾಮಸಭೆ ಬಳಿಕ ಮಹಿಳಾ ಗ್ರಾಮಸಭೆ ನಡೆಸುವ ಭರವಸೆ ನೀಡಿದ ಅಧಿಕಾರಿಗಳು ಮಕ್ಕಳ ಗ್ರಾಮಸಭೆ ಮುಗಿಸಿದರು.
ಬಳಿಕ ಮಹಿಳಾ ಗ್ರಾಮಸಭೆ ನಡೆಸಲು ಮುಂದಾದಾಗ ನಿರೀಕ್ಷಿತ ಮಹಿಳೆಯರು ಹಾಜರಿಲ್ಲದ ಕಾರಣ ಮತ್ತೊಂದು ದಿನ ಆಯೋಜಿಸುವುದಾಗಿ ಸಿಡಿಪಿಓ ಎಂ.ಕೆ.ಕುಮಾರಸ್ವಾಮಿ ಪ್ರಕಟಿಸಿದರು.
ಇದಕ್ಕೂ ಮುನ್ನ ನಡೆದ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಂದೆ ರಾತ್ರಿ ನಿತ್ಯ ಮದ್ಯಪಾನ ಮಾಡುತ್ತಾರೆ. ಸಿಸಿ ಕ್ಯಾಮರಾ ಅಳವಡಿಸಿ ಎಂದು ಮನವ ಸಲ್ಲಿಸಿದರು.
ಶಾಲೆಯ ಕೌಂಪೌಂಡ್ ನಿರ್ಮಾಣ, ನೀರಿನ ವ್ಯವಸ್ಥೆ, ಗಿಡಗಂಟೆಗಳ ತೆರವು, ಶೌಚಾಲಯದ ನಿಯಮಿತ ಸ್ವಚ್ಚತೆ ಮುಂತಾಗಿ ದೂರು ನೀಡಿದರು.
ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಮಾನಸ, ಮಕ್ಕಳ ಸಹಾಯವಾಣಿ ಮೇಲ್ವಿಚಾರಕ ವೀರಪ್ಪ, ಸಂಪನ್ಮೂಲ ವ್ಯಕ್ತಿ ರಾಣಿಚಂದ್ರಶೇಖರ್, ಪಿಡಿಓ ಹರೀಶ್ ಸೇರಿದಂತೆ ಗ್ರಾಪಂ ಸದಸ್ಯರು ಹಾಜರಿದ್ದರು.