ಮಂಡ್ಯ :- ನಗರದ ತಮಿಳು ಕಾಲೋನಿ ನಿವಾಸಿಗಳು ವಾಸ ಮಾಡುತ್ತಿದ್ದ ಗುಡಿಸಲು ಗಳಿಗೆ ಬೆಂಕಿ ಬಿದ್ದು 17 ವರ್ಷ ಕಳೆದರೂ ಪರಿಹಾರ ಮತ್ತು ಮೂಲಸೌಕರ್ಯ ಕಲ್ಪಿಸದೆ ವಂಚನೆ ಮಾಡುತ್ತಿರುವುದನ್ನು ವಿರೋಧಿಸಿ ಡಾ. ಬಿ ಆರ್ ಅಂಬೇಡ್ಕರ್ ಜೈ ಭೀಮ್ ಸಂಘಟನೆ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿತು.
ಸಂಘಟನೆಯ ನೇತೃತ್ವದಲ್ಲಿ ತಮಿಳು ಕಾಲೋನಿ ಯಿಂದ ಮೆರವಣಿಗೆ ಹೊರಟ ನಿವಾಸಿಗಳು ನಗರ ಸಭೆಗೆ ತೆರಳಿ ಮನವಿ ಸಲ್ಲಿಸಿ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಧರಣಿ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಬೆಂಕಿಯಿಂದ ಬೆಂದು ಸಂಕಷ್ಟದ ಬದುಕು ನಡೆಸುತ್ತಿರುವವರಿಗೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದರು.
ನೆಹರು ನಗರ ವ್ಯಾಪ್ತಿಯ ತಮಿಳು ಕಾಲೋನಿಯ 7 ಎಕರೆ 15 ಗುಂಟೆ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ನೂರಾರು ಕುಟುಂಬಗಳು ವಾಸ ಮಾಡುತ್ತಿದ್ದವು ಆದರೆ 2008ರಲ್ಲಿ ಇಲ್ಲಿನ ಗುಡಿಸಲುಗಳು ಬೆಂಕಿ ಬಿದ್ದು ಸುಟ್ಟುಹೋದವು, ಅಂದಿನಿಂದ ಡಾ| ಬಿ.ಆರ್.ಅಂಬೇಡ್ಕರವರ ಸಂವಿಧಾನದ ಬದ್ಧವಾಗಿ ಮೂಲಭೂತ ಸೌಕರ್ಯಗಳಾದ ಭೂಮಿ, ನೀರು, ವಾಸಿಸಲು ಯೋಗ್ಯವಾದ ಮನೆ. ಶಿಕ್ಷಣ, ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಿ ಸೂಕ್ತ ಪರಿಹಾರ ವಿತರಿಸದೆ ಸರ್ಕಾರ ವಂಚನೆ ಮಾಡುತ್ತಾ ಬಂದಿದೆ, 17 ವರ್ಷ ಕಳೆದರೂ ಇಂದಿನವರೆಗೂ ಯಾವುದೇ ಪರಿಹಾರ ಸೌಲಭ್ಯ ದೊರಕದಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಕಿಡಿಕಾರದರು.
ತಮಿಳು ಕಾಲೋನಿ ಪ್ರದೇಶದ 524 ಮನೆಗಳಿಗೆ ಹಕ್ಕುಪತ್ರಗಳು, ಮನೆ ನಿರ್ಮಾಣ, ಸೂಕ್ತ ಪರಿಹಾರ ಮತ್ತು ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಎ.ವೆಂಕಟೇಶ್, ವಿಜಯಕುಮಾರ್, ಕೆ ನಾರಾಯಣಸ್ವಾಮಿ, ಸುರೇಶ್,ಕೊಂಗನಾಟಮ್ಮ, ಬಾಬು,ಮುರುಗನ್,ದೇವರಾಜು,ಅರ್ಜುನ್, ಶ್ರೀಕಾಂತ್,ಏಳುಮಲೈ, ಅಂಬಿಗನ್ ನೇತೃತ್ವ ವಹಿಸಿದ್ದರು.