ಮಂಡ್ಯ :- ರೈತರ ಜೀವನಾಡಿ ಕೆ ಆರ್ ಎಸ್ ಜಲಾಶಯದ ಸುರಕ್ಷತೆ ಹಿನ್ನೆಲೆಯಲ್ಲಿ ಟ್ರಯಲ್ ಬ್ಲಾಸ್ಟ್ ಸ್ಥಗಿತಗೊಳಿಸಿ ಅಣೆಕಟ್ಟೆ ಸುರಕ್ಷತಾ ಮಸೂದೆ ಅನ್ವಯ ಅಣೆಕಟ್ಟೆ ಸುರಕ್ಷತಾ ಸಮಿತಿ ರಚಿಸುವಂತೆ ಒತ್ತಾಯಿಸಿ ರೈತರು ಮಂಡ್ಯದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ, ಜನಪರ ಸಂಘಟನೆಗಳ ಆಶ್ರಯದಲ್ಲಿ ನಗರದ ಸರ್ ಎಂ ವಿ ಪ್ರತಿಮೆ ಬಳಿ ಧರಣಿ ನಡೆಸಿ ಕೆ ಆರ್ ಎಸ್ ಸುತ್ತಮುತ್ತಲ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿರುವ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿರಿಗೆ ಮನವಿ ಸಲ್ಲಿಸಿದ ಪ್ರತಿಭಟನಾ ನಿರತ ರೈತರು ಟ್ರಯಲ್ ಬ್ಲಾಸ್ಟ್ ಸ್ಥಗಿತಗೊಳಿಸಲು ಮುಂದಾಗುವಂತೆ ಒತ್ತಾಯಿಸಿದರು.
ಮಂಡ್ಯ ಜಿಲ್ಲೆಯ ಜನರ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಅಣೆಕಟ್ಟೆಗೆ ನೂರು ವರ್ಷ ತುಂಬು ತಿದೆ ಇಷ್ಟೊಂದು ಹಳೆಯದಾದ ಪಾರಂಪರಿಕ ಅಣೆಕಟ್ಟೆ ಸಮೀಪದ ಬೇಬಿ ಬೆಟ್ಟ ಸುತ್ತಮುತ್ತಲ ಪ್ರದೇಶದಲ್ಲಿ ಸ್ಪೋಟಕ ಕಾಯ್ದೆ, ಅರಣ್ಯ ಸಂರಕ್ಷಣಾ ಕಾಯ್ದೆ, ಪರಿಸರ ಕಾಯ್ದೆ ಉಲ್ಲಂಘಿಸಿ ಮೆಗ್ಗರ್ ಬ್ಲಾಸ್ಟ್, ಬೋರ್ ಬ್ಲಾಸ್ಟ್ ಬಳಸಿ ಅಕ್ರಮ ಗಣಿಗಾರಿಕೆ ನಡೆಸಲಾಗಿದ್ದು, 2018ರ ಸೆಪ್ಟೆಂಬರ್ ನಲ್ಲಿ ಇಂತಹ ಸ್ಫೋಟ ದಿಂದ ಸೃಷ್ಟಿಯಾದ ಕಂಪನದ ಅಪಾಯಕಾರಿ ಅಲೆ ಕೆಆರ್‌ಎಸ್‌ನಲ್ಲಿರುವ ಭೂಕಂಪನ ಮಾಪನ ಕೇಂದ್ರ ದಾಖಲು ಮಾಡಿಕೊಂಡಿತ್ತು ಇದರಿಂದ ಎಚ್ಚೆತ್ತ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲು ನೀಡಿದ ನಿರ್ದೇಶನದಂತೆ ಗಣಿಗಾರಿಕೆ ನಿಷೇಧಿಸಲಾಗಿದೆ ಎಂದು ಹೇಳಿದರು.
ಆದರೂ ಸಹ ಅಕ್ರಮ ಗಣಿಗಾರಿಕೆ ಲಾಭದ ಮೇಲೆ ಕಣ್ಣಿಟ್ಟಿರುವ ಗಣಿಮಾಲೀಕರು ಪರವಾನಿಗೆ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಗಣಿಗಾರಿಕೆ ಮುಂದುವರೆಸಿದ್ದು ಅಲ್ಲದೆ ಗಣಿಗಾರಿಕೆ ಸುಗಮವಾಗಿ ಮುಂದುವರಿಸಲು ನ್ಯಾಯಾಲಯದ ನೆರವು ಪಡೆಯಲು ಮುಂದಾಗಿದ್ದು ಇದರ ಪರಿಣಾಮವಾಗಿ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿದೆ ಎಂದು ಆರೋಪಿಸಿದರು.
ಕೃಷ್ಣರಾಜಸಾಗರ ರಕ್ಷಣೆಗೆ ಜಿಲ್ಲಾಡಳಿತ ನಿರ್ಲಕ್ಷ ತೋರಿದ್ದು ಮುಂದಾಗುವ ಅನಾಹುತ ತಪ್ಪಿಸಲು ಅಣೆಕಟ್ಟು ಸುರಕ್ಷತಾ ಮಸೂದೆ 2021ರ ಪ್ರಕಾರ ಕೂಡಲೇ ಅಣೆಕಟ್ಟು ಸುರಕ್ಷತಾ ಸಮಿತಿ ರಚಿಸಬೇಕು, ಪಾರಂಪರಿಕ ಅಣೆಕಟ್ಟೆ ಉಳಿಸಿಕೊಳ್ಳಲು ಟ್ರಯಲ್ ಬ್ಲಾಸ್ಟ್ ಸ್ಥಗಿತಗೊಳಿಸಬೇಕು, ಕಾಯಿದೆ ಉಲ್ಲಂಘಿಸಿ ಅಕ್ರಮ ಗಣಿಗಾರಿಕೆ ನಡೆಸಿರುವ ಗಣಿ ಮಾಲೀಕರಿಂದ ಬಾಕಿ ಇರುವ ರಾಜಧನವನ್ನು ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸುನೀತಾ ಪುಟ್ಟಣ್ಣಯ್ಯ, ಎ.ಎಲ್ ಕೆಂಪೂ ಗೌಡ, ಚಂದ್ರಶೇಖರ್, ಜಿಎಸ್ ಲಿಂಗಪ್ಪಾಜಿ, ತುಮಕೂರು ಜಿಲ್ಲೆಯ ರೈತ ಮುಖಂಡ ಶಂಕರ್, ಮೈಸೂರು ಜಿಲ್ಲೆಯ ಹೊಸಕೋಟೆ ಬಸವರಾಜ್, ಸಿಐಟಿಯು ಸಂಘಟನೆಯ ಸಿ.ಕುಮಾರಿ, ಕರ್ನಾಟಕ ಜನಶಕ್ತಿ ಸಂಘಟನೆಯ ಪೂರ್ಣಿಮಾ, ಸಾಮಾಜಿಕ ಕಾರ್ಯಕರ್ತ ಕೆ ಸಿ ರವೀಂದ್ರ ನೇತೃತ್ವ ವಹಿಸಿದ್ದರು.