ಮಂಡ್ಯ :- ಡೆಂಗ್ಯೂ ನಿಯಂತ್ರಣಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಸೊಳ್ಳೆ ನಿಯಂತ್ರಣ ಔಷಧಿ ಸಿಂಪಡಿಸಿ,ಸೊಳ್ಳೆ ಪರದೆ ಹೊದ್ದು ಪ್ರತಿಭಟಿಸಿದರು.
ಬಿಜೆಪಿ ಪಕ್ಷದ ರಾಜ್ಯ ವೈದ್ಯಕೀಯ ಪ್ರಕೋಷ್ಟ ನೇತೃತ್ವದಲ್ಲಿ ಕಾರ್ಯಕರ್ತರು ನಗರಸಭೆ ಆವರಣದಲ್ಲಿ ರಾಜ್ಯ ಸರ್ಕಾರ ಜನತೆಗೆ ಡೆಂಗ್ಯೂ ಭಾಗ್ಯ ಕಲ್ಪಿಸಿದೆ ಎಂದು ದಿಕ್ಕಾರದ ಘೋಷಣೆ ಕೂಗಿ ಆರೋಗ್ಯ ಸಚಿವರ ರಾಜೀನಾಮೆಗೆ ಒತ್ತಾಯಿಸಿದರು.
ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಜನತೆ ಸಾವನ್ನಪ್ಪುವ ಪರಿಸ್ಥಿತಿ ಎದುರಾಗಿದೆ,ಐದು ಗ್ಯಾರಂಟಿ ನಡುವೆ ಜನರಿಗೆ ಸಾವಿನ ಗ್ಯಾರಂಟಿ ನೀಡಿದ್ದಾರೆ, ಕಳೆದ 6 ತಿಂಗಳಿನ ಹಿಂದೆ ರಾಜ್ಯದಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಆದರೆ ಆರೋಗ್ಯ ಇಲಾಖೆ,ಸ್ಥಳೀಯ ಸಂಸ್ಥೆ ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿರುವುದು ಆಗ ಸರ್ಕಾರದ ನಿರ್ಲಕ್ಷ್ಯದಿಂದ ರಾಜ್ಯದಲ್ಲಿ ಹಲವಾರು ಮಕ್ಕಳು,ವೃದ್ಧರು ಬಲಿಯಾಗಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಎಂಟು ಸಾವಿರ ಜನತೆ ಡೆಂಗ್ಯೂ ಜ್ವರಕ್ಕೆ ಒಳಗಾಗಿದ್ದಾರೆ ಎಂದು ಅಧಿಕೃತವಾಗಿ ಹೇಳಲಾಗಿದೆ ಆದರೆ ವಾಸ್ತವವಾಗಿ ಅಂದಾಜಿನ ಪ್ರಕಾರ 15 ಸಾವಿರಕ್ಕೂ ಹೆಚ್ಚು ಜನತೆ ಡೆಂಗ್ಯೂ ಜ್ವರದಿಂದ ನರಳುತ್ತಿದ್ದಾರೆ. ಬೆಂಗಳೂರು ನಗರದಲ್ಲಿ 1800 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಪ್ರತಿನಿತ್ಯ 250ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ಹತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಆದರೂ ಸಹ ರಾಜ್ಯ ಸರ್ಕಾರ ನಿರ್ಲಕ್ಷ ವಹಿಸಿದೆ ಇದರಿಂದ ಡೆಂಗ್ಯೂ ಜ್ವರ ನಿಯಂತ್ರಣ ವಾಗಿಲ್ಲ ಎಂದು ಹೇಳಿದರು
ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಔಷಧಿ ಮಾರಾಟಗಾರರು ಡೆಂಗ್ಯೂ ಗೆ ಸಂಬಂಧಿಸಿದ ಔಷಧಿಗಳನ್ನು ಹೆಚ್ಚಿನ ಹಣಕ್ಕೆ ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ ಇವರ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ, ಭ್ರಷ್ಟಾಚಾರದಲ್ಲಿ ನಿರತರಾಗಿರುವ ಕಾಂಗ್ರೇಸ್ ಸರ್ಕಾರ ಇದೇ ರೀತಿ ನಿರ್ಲಕ್ಷ್ಯ ಮುಂದುವರೆಸಿದರೆ ರಾಜ್ಯದ ಜನತೆ ಡೆಂಗ್ಯೂ ನಿಂದ ಬಳಲಿ ರೋಗಗ್ರಸ್ಥ ರಾಜ್ಯ ವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಡೆಂಗ್ಯೂ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು, ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳು ತುರ್ತು ಕ್ರಮ ವಹಿಸಲು ಮುಂದಾಗಬೇಕು,ಡೆಂಗ್ಯೂ ಜ್ವರ ಪೀಡಿತರಿಗೆ ಸಕಾಲದಲ್ಲಿ ಉತ್ತಮ ಚಿಕಿತ್ಸೆ ಸೌಲಭ್ಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಕೆ.ಪರಮಾನಂದ,ಡಾ.ಸದಾನಂದ,ಶಿವಕುಮಾರ ಆರಾಧ್ಯ, ಸಿ ಟಿ ಮಂಜುನಾಥ್,ದೇವಿರಮ್ಮ, ಪ್ರಸನ್ನ ಕುಮಾರ್,ಎಸ್ ಸಿ ಯೋಗೇಶ್, ಬಿ.ಕೃಷ್ಣ ನೇತೃತ್ವ ವಹಿಸಿದ್ದರು.