-7.1 C
New York
Monday, December 23, 2024

Buy now

spot_img

ಪರಿಶಿಷ್ಟರ ಅನುದಾನ ದುರ್ಬಳಕೆ ವಿರುದ್ಧ ಬಿಎಸ್‌ಪಿ ಧರಣಿ

ಮಂಡ್ಯ :- ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಮೀಸಲಿರಿಸಿದ್ದ ಎಸ್ ಸಿ ಎಸ್ ಪಿ ಹಾಗೂ ಟಿ ಎಸ್ ಟಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ವಿರೋಧಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪಕ್ಷದ ಕಾರ್ಯಕರ್ತರು ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿ ಪರಿಶಿಷ್ಟರ ಅಭಿವೃದ್ಧಿಗೆ ಮೀಸಲು ಇರುವ ಅನುದಾನವನ್ನು ನಿರ್ದಿಷ್ಟ ಯೋಜನೆಗಳಿಗೆ ಬಳಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರನ್ನ ಸಬಲ ರನ್ನಾಗಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಕಾಯ್ದೆಯನ್ನು ರೂಪಿಸಲಾಯಿತು, ಇದರಿಂದ ಪರಿಶಿಷ್ಟರ ಅಭಿವೃದ್ಧಿ ಪೂರಕ ಎಂಬ ಆಶಾ ಭಾವನೆ ಎಲ್ಲರಲ್ಲಿತ್ತು ಆದರೆ ರಾಜ್ಯವನ್ನಾಳಿದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿನಿಯಮದ ಆಶಯ ಜಾರಿಗೊಳಿಸದೆ ಅನ್ಯಾಯ ಮಾಡಿವೆ ಎಂದು ಆರೋಪಿಸಿದರು.
2014 – 15ನೇ ಸಾಲಿನಿಂದ ಇಲ್ಲಿಯವರೆಗೆ 2.94,963 ಕೋಟಿ ಹಣವನ್ನು ಪರಿಶಿಷ್ಟ ಅಭಿವೃದ್ಧಿಗೆ ಮೀಸಲಿರಿಸಲಾಗಿತ್ತು ಆದರೆ ಶೇ.ಹತ್ತರಷ್ಟು ಹಣವನ್ನು ಸಹ ಪರಿಶಿಷ್ಟರಿಗೆ ತಲುಪಿಸದೆ ಆಳುವ ಸರ್ಕಾರಗಳು ದ್ರೋಹ ಮಾಡಿವೆ, 2023 -24 ಮತ್ತು 24-25 ನೇ ಸಾಲಿನಲ್ಲಿ ಕಾಂಗ್ರೆಸ್ ಸರ್ಕಾರ 25398 ಕೋಟಿಯನ್ನು ಗ್ಯಾರಂಟಿ ಯೋಜನೆಗೆ ಬಳಸಿದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ 19,000 ಕೋಟಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದೆ ಅದೇ ರೀತಿ ಭೋವಿ ಅಭಿವೃದ್ಧಿ ನಿಗಮ, ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮಗಳಲ್ಲಿ ಅವ್ಯವಹಾರ ನಡೆದಿದೆ, ಇದೀಗ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಪರಿಶಿಷ್ಟರ ಮೀಸಲು ಹಣ ದುರ್ಬಳಕೆ ಜೊತೆಗೆ ಜಾರಿಯಲ್ಲಿದ್ದ ಹಲವು ಯೋಜನೆಗಳನ್ನು ರದ್ದು ಮಾಡಲಾಗಿದೆ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಪ್ರೋತ್ಸಾಹಧನ ನಿಲ್ಲಿಸಲಾಗಿದೆ, ವಿದೇಶದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಪ್ರಬುದ್ಧ ಯೋಜನೆಗೆ ಕೊಕ್ಕೆ ಹಾಕಲಾಗಿದೆ. ಶಾಲಾ – ಕಾಲೇಜು ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆಯುವ ಆರಂಭದಲ್ಲೇ ಪೂರ್ಣ ಶುಲ್ಕ ಪಾವತಿಸಲು ಸೂಚಿಸಲಾಗಿದೆ, ಎರಡು ವರ್ಷದಿಂದ ವಿದ್ಯಾರ್ಥಿ ವೇತನ ನೀಡುತ್ತಿಲ್ಲ, ಬ್ಯಾಕ್ ಲಾಕ್ ಹುದ್ದೆಗಳನ್ನು ಭರ್ತಿ ಮಾಡಿಲ್ಲ, ಖಾಸಗಿ ವಲಯದಲ್ಲಿ ಮೀಸಲಾತಿ ಕಾಯ್ದೆ ಜಾರಿಗೊಳಿಸಿಲ್ಲ, ಮ್ಯಾನೇಜ್ಮೆಂಟ್ ಕೋಟಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ರದ್ದುಗೊಳಿಸಲಾಗಿದೆ ಆದರೂ ಸಹ ರಾಜ್ಯ ಸರ್ಕಾರ ನಿರ್ಲಕ್ಷ ತೋರಿದ್ದು,ಪರಿಶಿಷ್ಟ ಸಮುದಾಯದ ಶಾಸಕರು,ಸಂಸದರು, ಸಚಿವರು ಬಾಯಿ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟರ ಮೀಸಲು ಹಣದಲ್ಲಿ ಸಮುದಾಯದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಮಟ್ಟದ ಶಿಕ್ಷಣದವರೆಗೆ ಗುಣಮಟ್ಟದ ಶಿಕ್ಷಣ ನೀಡಬಹುದಿತ್ತು, ನಿರುದ್ಯೋಗಿ ಯುವ ಜನತೆಗೆ ಸ್ವಯಂ ಉದ್ಯೋಗ ಒದಗಿಸಬಹುದಾಗಿತ್ತು, ವಸತಿ ರಹಿತರಿಗೆ ಸ್ವಂತ ಮನೆ ನಿರ್ಮಿಸಿ ಕೊಡಬಹುದಿತ್ತು, ಭೂ ರಹಿತ ಕೃಷಿ ಕಾರ್ಮಿಕರಿಗೆ ತಲ 5 ಎಕರೆ ಕೃಷಿ ಜಮೀನು ಖರೀದಿಸಿ ಕೊಡಬಹುದಿತ್ತು, ರೋಗಿಗಳಿಗೆ ಉಚಿತವಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಬಹುದಾಗಿತ್ತು ಆದರೆ ಇದ್ಯಾವುದನ್ನು ಆಳವ ಸರ್ಕಾರಗಳು ಮಾಡಿಲ್ಲ ಎಂದು ಕಿಡಿಕಾರಿದರು.
ರಾಜ್ಯಪಾಲರು ಮಧ್ಯಪ್ರವೇಶಿಸಿ ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಕಾಯ್ದೆ ಯಂತೆ ರೂಪಿಸಿರುವ ಯೋಜನೆಗಳು ನೇರವಾಗಿ ಪರಿಶಿಷ್ಟರಿಗೆ ತಲುಪಬೇಕು, ಮೀಸಲು ಹಣವನ್ನು ಅನ್ಯ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ಸದರಿ ಕಾಯ್ದೆ ಯಡಿ ಕಾನೂನು ಕ್ರಮ ಜರುಗಿಸಿ ಶಿಕ್ಷೆಗೆ ಗುರಿಪಡಿಸಬೇಕು, ದುರ್ಬಳಕೆ ಯಾಗಿರುವ ಹಣವನ್ನು ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಖಾತೆಗೆ ಹಿಂತಿರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಸಿ ಎಸ್ ಶಿವಶಂಕರ್, ಜಿಲ್ಲಾ ಉಸ್ತುವಾರಿ ಚೆಲುವರಾಜು, ಜಿಲ್ಲಾ ಸಂಯೋಜಕ ಮಹಾದೇವ,ವೆಂಕಟಗಿರಿಯಯ್ಯ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles