ನಾಗಮಂಗಲ :- ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಪತ್ರಕರ್ತ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರವಲಯ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯ ತೊಳಲಿ ಗ್ರಾಮದ ಸಮೀಪ ಶುಕ್ರವಾರ ಸಂಜೆ ನಡೆದಿದೆ.
ತಾಲೂಕಿನ ಕಸಬಾ ಹೋಬಳಿಯ ಬ್ಯಾಡರಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಸಿ.ಚಂದ್ರಪ್ಪ ಅವರ ಪುತ್ರ ಬಿ.ಸಿ.ಮೋಹನ್ ಕುಮಾರ್(49) ಮೃತಪಟ್ಟಿದ್ದಾರೆ. ಕಾರ್ಯನಿಮಿತ್ತ ಬೆಳ್ಳೂರಿಗೆ ತೆರಳಿ ನಾಗಮಂಗಲಕ್ಕೆ ತಮ್ಮ ಕಾರಿನಲ್ಲಿ ಹಿಂದಿರುವಾಗ ಮೈಸೂರಿನಿಂದ ಬೆಳ್ಳೂರು ಕಡೆಗೆ ಹೋಗುತ್ತಿದ್ದ ಲಾರಿಗೆ ಮುಖಾಮುಖಿಯಾಗಿ ಡಿಕ್ಕಿಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡು ಕಾರು ಚಲಾಯಿಸುತ್ತಿದ್ದ ಬಿ.ಸಿ.ಮೋಹನ್ ಕುಮಾರ್ ಅವರಿಗೆ ತೀವ್ರತರವಾಗಿ ತಲೆಗೆ ಪೆಟ್ಟುಬಿದ್ದಿತ್ತು. ಸ್ಥಳೀಯರು ಬಿಜಿನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮೃತರು ಪ್ರಜಾವಾಣಿ, ವಿಜಯವಾಣಿ, ಆಂದೋಲನ ಸೇರಿದಂತೆ ಹಲವು ದಿನಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಕನ್ನಡಪರ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಪ್ರಸ್ತುತ ಪತ್ರಕರ್ತ ವೃತ್ತಿಯ ಜತೆಗೆ ತಾಲೂಕು ಹೇಮಾವತಿ ನೀರು ಬಳಕೆದಾರರ ಸಂಘದ ಅಧ್ಯಕ್ಷರಾಗಿದ್ದ ಇವರು ತಾಲೂಕಿನ ಹೇಮಾವತಿ ನಾಲೆಗಳಿಗೆ ನೀರು ಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ರೈತರ ಪರವಾಗಿ ಹಾಗೂ ಕನ್ನಡಪರವಾಗಿ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದರು.
ಮೃತರು ತಾಯಿ ಪದ್ಮ , ಪತ್ನಿ ಲತಾ ಹಾಗೂ ಸಹೋದರ ಮತ್ತು ಸಹೋದರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಾಜಿ ಶಾಸಕರಾದ ಸುರೇಶ್ ಗೌಡ, ಪಿ.ರಾಮಯ್ಯ ಮತ್ತು ಎನ್.ಅಪ್ಪಾಜಿಗೌಡ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮೃತರ ಹುಟ್ಟೂರಾದ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ 11-30 ಕ್ಕೆ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.