1.9 C
New York
Saturday, December 21, 2024

Buy now

spot_img

ವ್ಯಸನ ಮುಕ್ತ ಸಮಾಜ ನಮ್ಮದಾಗಲಿ : ಪೊಲೀಸ್ ಇಲಾಖೆ ಆಶಯ

ಮಾದಕ ವಸ್ತುಗಳನ್ನು ತನಗೆ ಅಥವಾ ಪರರಿಗೆ ಹಾನಿಕಾರಕವಾಗುವಂತೆ ಉಪಯೋಗಿಸುವುದಕ್ಕೆ ಮಾದಕ ವ್ಯಸನ ಎಂದು ಕರೆಯುತ್ತಾರೆ. ಇಂದು ಮಾದಕ ವ್ಯಸನದಿಂದಾಗುವ ಪರಿಣಾಮಗಳ ಬಗ್ಗೆ ಎಲ್ಲರಿಗೂ ಅರಿವಿದೆ. ಆದರೂ ಹೆಚ್ಚಿನ ಜನರು ದಾಸರಾಗುತ್ತಿದ್ದಾರೆ. ಮಾದಕ ವಸ್ತುಗಳಾದ ಡ್ರಗ್ಸ್, ಹೆರಾಯಿನ್, ಅಫಿಮು, ಗಾಂಜಾ, ಸಿಗರೇಟು, ಗುಟ್ಕಾ, ತಂಬಾಕು ಮತ್ತು ಆಲ್ಕೋಹಾಲ್ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ ಕೌಟುಂಬಿಕ ಸಂಬಂಧಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಮತ್ತು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ.

. ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ವಿವೇಕ ಸಾಮರ್ಥ್ಯವು ಕುಗ್ಗುವುದರಿಂದ ಅಪರಾಧಗಳನ್ನು ಎಸಗುವ ಸಾಧ್ಯತೆ ಹೆಚ್ಚಿರುತ್ತದೆ. ವ್ಯಕ್ತಿಯ ಮೆದುಳು, ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತದೆ. ಆಧುನಿಕತೆಯ ಕೊಡುಗೆಗಳಾಗಿ ದುರ್ವ್ಯಸನಗಳು ಸಮಾಜದಲ್ಲಿ ಹೆಚ್ಚುತ್ತಿವೆ. ಇದರಿಂದ ಜನರ ಬದುಕು ದುಸ್ತರವಾಗುತ್ತಿವೆ. ಮಾದಕ ವ್ಯಸನಿಗಳು ಕ್ಷಣಿಕ ಸುಖಕ್ಕಾಗಿ ಎಷ್ಟು ಹಣ ಕೊಟ್ಟರು ಮರಳಿ ಸಿಗದ ಪ್ರಾಣವನ್ನೇ ಬಲಿ ಕೊಡುತ್ತಿದ್ದಾರೆ. ಭವಿಷ್ಯದ ವಿವೇಚನೆ ಮಾಡದೇ ತಾತ್ಕಾಲಿಕ ಆಕ್ರೋಶ, ಆಲೋಚನೆ ಮತ್ತು ಅಪರಾಧಗಳನ್ನು ಮಾಡುವುದರಿಂದ ಜೀವನವನ್ನು ಸಂಕಷ್ಟಕ್ಕೆ ಒಳಪಡಿಸಿಕೊಳ್ಳುತ್ತಾರೆ. ಕುಡಿತದಿಂದ ಮತ್ತು ಸಿಗರೇಟು ಹಾಗೂ ಗುಟ್ಕಾದಂತಹ ತಂಬಾಕಿನ ಸೇವನೆಯಿಂದ ತನ್ನ ಪರಿಸರವನ್ನು, ತನ್ನ ಸಂಗಡ ಇರುವವರನ್ನು ತನ್ನಷ್ಟಕ್ಕೆ ತಾನೇ ಹಾಳು ಮಾಡಿಕೊಳ್ಳುತ್ತಾರೆ. ತಮ್ಮ ಜೀವನ ಹಾಳು ಮಾಡಿಕೊಳ್ಳುವುದರ ಜೊತೆಗೆ ಅವರ ಅವಲಂಬಿತರನ್ನು ನೋವಿನ ಕೂಪಕ್ಕೆ ತಳ್ಳುತ್ತಾರೆ.
ತಿನ್ನುವ ಪದಾರ್ಥಗಳಲ್ಲಿ ಸಣ್ಣ ಕಲ್ಲು ಸಿಕ್ಕರೂ ಅದನ್ನು ತಿರಸ್ಕರಿಸುವ ಜನರು ದೇಹಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ ಸಿಗರೇಟ್, ಗುಟ್ಕಾ ಸೇವನೆ, ಮದ್ಯಪಾನದಂತಹ ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಹೈಸ್ಕೂಲ್ ಹಂತದಲ್ಲೇ  ಮಾದಕ ವ್ಯಸನಗಳಿಗೆ ಬಲಿಯಾಗಿ ಅದರಿಂದ ಹೊರ ಬರಲಾಗದೆ ಜೀವನವನ್ನೇ ಅಂತ್ಯಗೊಳಿಸುವಂತಾಗುವ ಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗುತ್ತಿದೆ.
ಪ್ರತಿ ವರ್ಷ ಜೂನ್-26 ರಂದು ವಿಶ್ವದಾದ್ಯಂತ ಮಾದಕ ವ್ಯಸನ ಮತ್ತು ಮಾನವ ಕಳ್ಳಸಾಗಾಣೆ ವಿರೋದಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಪೊಲೀಸರ ಗುರಿಯಾಗಿದ್ದು, ಗುರಿ ಸಾಧಿಸಲು ಪ್ರತಿಯೊಬ್ಬ ವ್ಯಕ್ತಿ, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಮುದಾಯಗಳು ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ಅವಶ್ಯಕವಾಗಿರುತ್ತವೆ. ರಾಷ್ಟ್ರದ ಭವಿಷ್ಯ ರೂಪಿಸಬೇಕಾಗಿರುವ ಯುವ ಸಮೂಹ ವ್ಯಸನಿಗಳ ಸಹವಾಸ ಹಾಗೂ ಮೋಜು ಮಸ್ತಿಗಾಗಿ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.
ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ಪ್ರಮುಖವಾಗಿ ವಿದ್ಯಾರ್ಥಿಗಳು, ಯುವಕರು ಮುಂದಾಗಬೇಕು. ವಿದ್ಯಾರ್ಥಿಗಳು ಮಾದಕ ವಸ್ತುಗಳ ವಿರುದ್ದ ಪ್ರಚಾರಕರಾಗಿ ತಮ್ಮ ತಮ್ಮ ಮನೆಗಳಿಂದಲೇ ದುಶ್ಚಟ ಬಿಡಿಸಲು ಆರಂಭಿಸಬೇಕು. ಕುತುಹಲಕ್ಕಾಗಿಯೂ ಯಾರೊಬ್ಬರೂ ಮಾದಕ ದ್ರವ್ಯ ಬಳಸಬಾರದು. ಯುವಕರು ತಮ್ಮ ವೃತ್ತಿಯನ್ನು ಕಟ್ಟಿಕೊಳ್ಳುವತ್ತ ಗಮನಹರಿಸಬೇಕು ಚೆನ್ನಾಗಿ ಓದಬೇಕು, ಉತ್ತಮ ಉದ್ಯೋಗವನ್ನು ಪಡೆದು ತಮ್ಮ ತಮ್ಮ ಕುಟುಂಬಗಳ ಒಳಿತಿಗಾಗಿ ಚಿಂತಿಸಿ ಸಧೃಡಗೊಳ್ಳಬೇಕು. ಕ್ಷಣಿಕ ಸುಖಕ್ಕೆ ಬದುಕನ್ನು ಬಲಿಕೊಡದೆ ದುಶ್ಚಟಗಳ ದುಷ್ಪರಿಣಾಮ ಅರಿತು ಎಚ್ಚರದಿಂದಿದ್ದು, ದೇಶದ ಸತ್ಪ್ರಜೆಗಳಾಗಿ ಬದುಕು ನಡೆಸಬೇಕು.
ಮಾದಕ ವಸ್ತುವಿನ ವ್ಯಸನದಿಂದ ದೂರ ಇರುವ ಬಗ್ಗೆ ಯುವಕರನ್ನು ಜಾಗೃತಿಗೊಳಿಸಲು ಮತ್ತು ವ್ಯಸನಿಗಳನ್ನು ಆತ್ಮಹತ್ಯೆಯಿಂದ ದೂರಸರಿಸುವ ನಿಟ್ಟಿನಲ್ಲಿ ಆಂಗ್ಲ ಬರಹಗಾರರಾದ ಬ್ರೀಟಿಸ್ ಸ್ಪಾರ್ಕ್ಸ್ ರವರು “ಗೋ ಆಸ್ಕ್ ಆಲಿಸ್” ಎಂಬ ಅತ್ಯಂತ ಪ್ರಸಿದ್ಧವಾದ ಡ್ರಗ್ ವಿರೋದಿ ಪುಸ್ತಕವನ್ನು ಪ್ರಕಟಿಸಿದ್ದು, ಈ ಪುಸ್ತಕದಲ್ಲಿರುವಂತಹ ಆದರ್ಶನೀಯ ಅಂಶಗಳನ್ನು ಗುರುತಿಸಿ ಮಹತ್ವದ ಅಂಶಗಳನ್ನು ಮನಗಂಡು ಯುವಕರನ್ನು ಜಾಗೃತಿಗೊಳಿಸಿ ಈ ನಿಟ್ಟಿನಲ್ಲಿ ಹವ್ಯಾಸಿಗರನ್ನು ವ್ಯಸನ ಮುಕ್ತರನ್ನಾಗಿ ಮಾರ್ಪಡಿಸುವುದು ಮಹತ್ವದ ಕೆಲಸವಾಗಿರುತ್ತದೆ.
ವ್ಯಸನ ಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಪ್ರಮುಖ ಪಾತ್ರ ವಹಿಸುತ್ತಿದ್ದು, ವ್ಯಸನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಬೀದಿ ನಾಟಕಗಳು, ಗೀತೆ-ಗಾಯನಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿರುತ್ತದೆ. ತೆರೆದ ಮನೆ ಕಾರ್ಯಕ್ರಮದ ಮೂಲಕ ಮಕ್ಕಳ ಸಮಸ್ಯೆಗಳನ್ನು ಆಲಿಸುವ ಹಾಗೂ ಅವರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಶಾಲಾ ಕಾಲೇಜುಗಳ ಸುತ್ತಮುತ್ತ ವಿದ್ಯಾರ್ಥಿಗಳು ಮಾದಕ ವ್ಯಸನ ಹಾಗೂ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗದಂತೆ ಸೂಕ್ತ ನಿಗಾ ವಹಿಸಲಾಗಿರುತ್ತದೆ. ಮಾದಕ ದ್ರವ್ಯ ವ್ಯಸನ ಜನ ಜಾಗೃತಿ ಅಂಗವಾಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿರುತ್ತದೆ. ವಿದ್ಯಾರ್ಥಿಗಳ ದುಷ್ಕೃತ್ಯಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜಾಗೃತಿ ಮತ್ತು ಇತರೆ  ಉತ್ತಮ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಸ್ನೇಹಿ,ಜನ ಸ್ನೇಹಿಯಾಗಿದೆ. ಅನೇಕ ಸಮೀಕ್ಷೆ ಪ್ರಕಾರ ಶೇಕಡ 52% ಕ್ಕೂ ಹೆಚ್ಚು ಮಕ್ಕಳಿಗೆ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಅರಿವಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿರುತ್ತದೆ.
ಮಾದಕ ವ್ಯಸನ ವಿರೋದಿ ಮಾಸಾಚರಣೆ ಯಾವ ಕಾರಣಕ್ಕೆ ಅಗತ್ಯ ಎನ್ನುವುದು ಚಿಂತಿಸುವ ಅಗತ್ಯ ಇಂದಿನ ದಿನಗಳಲ್ಲಿ ಹೆಚ್ಚಾಗಿದೆ. ಭಾರತ ಒಂದು ಸಂಪದ್ಭರಿತ ರಾಷ್ಟ್ರವಾಗಿದ್ದು, ಈ ರಾಷ್ಟ್ರದ ಯುವ ಶಕ್ತಿಯನ್ನು ಸರಿಯಾದ ದಾರಿಯಲ್ಲಿ ಉಪಯೋಗಿಸುವ ಅಗತ್ಯ ಇದೆ. ನಮ್ಮ ದೇಶ ಯುವ ಶಕ್ತಿಯ ದೇಶವಾಗಿದ್ದು, ಶೇಕಡಾ 60 ರಷ್ಟು ಜನಸಂಖ್ಯೆ ಯುವ ಜನರಿಂದ ಕೂಡಿದೆ. ದೇಶದ ಆರ್ಥಿಕ, ಸಾಮಾಜಿಕ ಬೆಳವಣಿಗೆ ಯುವ ಶಕ್ತಿಯ ಮೇಲೆ ಹೊಂದಿಕೊಂಡಿದೆ. ನಮ್ಮ ದೇಶದ ಮೇಲೆ ಯಾವುದೇ ಬೇರೆ ರಾಷ್ಟ್ರ ಧಾಳಿ ಮಾಡಿದ್ದಲ್ಲಿ ಅದನ್ನು ಹೆದರಿಸಲು ಬೇಕಾದ ಸೈನ್ಯದ ಬಲವಿದೆ. ಆದರೆ ಕಣ್ಣಿಗೆ ಕಾಣದೆ ನಮ್ಮ ದೇಶದ ಯುವ ಜನತೆಯ ಮೇಲೆ ಗುಪ್ತವಾಗಿ ಧಾಳಿ ಮಾಡುತ್ತಿರುವುದು ಮಾದಕ ವ್ಯಸನಗಳು ವಿದ್ಯಾರ್ಥಿಗಳು ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತು ಜಾಗೃತರಾಗಿ ಸ್ವಯಂ ನಿಯಂತ್ರಣದಿಂದ ಮಾತ್ರ ವ್ಯಸನದಿಂದ ಮುಕ್ತವಾಗಬಹುದು.
ಮಾದಕ ವ್ಯಸನ ಎನ್ನುವುದು ಒಂದು ಸಮಸ್ಯೆ ಎನ್ನುವುದನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳಬೇಕಾಗಿದೆ. ಅದನ್ನು ಸಮಸ್ಯೆ ಎಂದು ಅರಿತು ಅದರ ದುಷ್ಪರಿಣಾಮದ ವಿರುದ್ಧ ಕೆಲಸ ಮಾಡಿದಾಗ ಮಾತ್ರ ನಮ್ಮ ಯುವ ಶಕ್ತಿ ಉತ್ತಮ ದಾರಿಯತ್ತ ಸಾಗಲು ಸಾಧ್ಯವಿದೆ. ಸಮಾಜದಲ್ಲಿ ಮಾದಕ ವ್ಯಸನಕ್ಕೆ ಮಕ್ಕಳು ಯುವಕರು ತುತ್ತಾಗದಂತೆ ಇರಬೇಕಾದರೆ ಪೋಷಕರು, ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು, ಸಮಾಜದಲ್ಲಿ ನಾಗರಿಕರು ಹೆಚ್ಚಿನ ಪಾತ್ರವಹಿಸಬೇಕಾಗಿರುತ್ತದೆ. ಕಾನೂನಿನ ಮೂಲಕ ಒಂದು ಕಡೆಯಿಂದ ಇದರ ನಿರ್ಮೂಲನೆ ಸಂಪೂರ್ಣವಾಗಿ ಆಗುವುದು ಅಸಾಧ್ಯ. ವಿದ್ಯಾರ್ಥಿಗಳಿಗೆ, ಯುವಜನತೆಗೆ ಅವರ ಮಾನಸಿಕ, ದೈಹಿಕ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕಾಗಿರುತ್ತದೆ. ಅವರ ಬದುಕಿನಲ್ಲಿ ಸೋಲು, ವೈಫಲ್ಯದ ಸಂದರ್ಭದಲ್ಲಿ ಅವರ ಮೇಲಿನ ಒತ್ತಡ ನಿವಾರಣೆಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಆಗಬೇಕಿದೆ. ಸಮಾಜದಲ್ಲಿ ಮಾದಕ ವ್ಯಸನ ಹೋಗಲಾಡಿಸುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆ ಆಗಿದೆ.

ವಿಶೇಷ ಲೇಖನ- ಜಿಲ್ಲಾ ಪೊಲೀಸ್ ಇಲಾಖೆ, ಮಂಡ್ಯ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles