ಮಂಡ್ಯ :- ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿರುವ ಅಮಾನುಷ ಪ್ರಕರಣ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ನೇತ್ರತ್ವದಲ್ಲಿ ಮಂಡ್ಯದಲ್ಲಿ ಪ್ರತಿಭಟನೆ ನಡೆಯಿತು.
ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗ ಬಂದ್ ಮಾಡಿ ನಗರದ ಮಿಮ್ಸ್ ಆವರಣದಿಂದ ಮೆರವಣಿಗೆ ಹೊರಟ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಒತ್ತಾಯಿಸಿ ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕೊಲ್ಕತ್ತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಸ್ನಾತಕೋತ್ತರ ವ್ಯೆದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಗೈದಿರುವುದು ಅಮಾನುಷ ಕೃತ್ಯವಾಗಿದ್ದು ವೈದ್ಯಕೀಯ ಸಮೂಹವನ್ನು ಅಘಾತಕ್ಕೀಡು ಮಾಡಿದೆ, ಪ್ರಕರಣ ಕುರಿತಂತೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸಿಲ್ಲಎಂದು ತಿಳಿಸಿದರು.
ಅಮಾನುಷ ಪ್ರಕರಣ ಕುರಿತು ಪೊಲೀಸರು ನಡೆಸಿರುವ ತನಿಖೆ ಬಗ್ಗೆ ಅಸಮಾಧಾನ ಸೂಚಿಸಿರುವ ಕೊಲ್ಕತ್ತಾ ಹೈಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಿದ್ದು, ಪೊಲೀಸರ ವೈಫಲ್ಯವನ್ನು ತೋರ್ಪಡಿಸಿದೆ ಎಂದು ಹೇಳಿದರು.
ಸ್ವಾತಂತ್ರ್ಯೋತ್ಸವ ದಿನದಂದು ದುಷ್ಕರ್ಮಿಗಳು ಆಸ್ಪತ್ರೆಯಲ್ಲಿ ದಾಂದಲೆ ನಡೆಸಿ ಸಾಕ್ಸ್ಯ ನಾಶ ಮಾಡಲು ಮುಂದಾಗಿದ್ದಾರೆ ಅಲ್ಲದೆ ಪ್ರತಿಭಟನಾ ನಿರತ ಕಿರಿಯ ವೈದ್ಯಾಧಿಕಾರಿಗಳ ಮೇಲೆ ದಾಳಿ ಮಾಡಿ ದೌರ್ಜನ್ಯ ಮಾಡಿದ್ದಾರೆ ಎಂದರು.
ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಪ್ರಕರಣ ಕುರಿತು ಸಂಪೂರ್ಣ ನಿರ್ಲಕ್ಷ್ಯ ತೋರಿದೆ, ಕರ್ತವ್ಯ ನಿರತ ವೈದ್ಯೆಗೆ ರಕ್ಷಣೆ ನೀಡುವಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ವಿಫಲವಾಗಿದೆ, ಇವರ ಉದಾಸೀನತೆಯಿಂದ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳ ಮೇಲೆ ಆಕ್ರಮಣ ನಡೆದಿದೆ ಎಂದು ಆರೋಪಿಸಿದರು.
ವ್ಯೆದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಟಿ ಎನ್ ಮರಿಗೌಡ, ಡಾ. ಗೋಪಾಲಕೃಷ್ಣ ಗುಪ್ತ,ಡಾ. ವಿನಯ್, ಡಾ, ವಸುಮತಿ, ಡಾ. ಮಂಜುನಾಥ್, ಡಾ. ಯೋಗೇಂದ್ರ ಕುಮಾರ್, ಡಾ. ಜಗದೀಶ್ ಕುಮಾರ್, ಡಾ. ಮೋಹನ್ ಕುಮಾರ್, ಡಾ. ಜ್ಞಾನವಿ, ಡಾ. ಶೀತಲ್, ಡಾ. ಬಿಂದ್ಯ, ಡಾ. ಅಶ್ವಿನಿ, ಡಾ. ಆಶಾಲತಾ ನೇತೃತ್ವ ವಹಿಸಿದ್ದರು.