ಮಂಡ್ಯ :- ಒಂದು ದೇಶ ಒಂದು ಚುನಾವಣೆ ವಿಷಯ ಕುರಿತು ಸಮಗ್ರ ಚರ್ಚೆ ನಡೆಸದೆ ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ರವಾನಿಸಿದರು.
ಒಂದು ದೇಶ ಒಂದು ಚುನಾವಣೆ ಬಿಜೆಪಿ ಪಕ್ಷದ ಗುಪ್ತ ಅಜೆಂಡವಾಗಿದೆ ಅಲ್ಲದೆ ದೇಶದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದ್ದು, ದೇಶದ ಜನರ ಅಭಿಪ್ರಾಯವೂ ಸಹ ವಿರುದ್ಧವಾಗಿದೆ ಆದರೂ ಸಹ ಕೇಂದ್ರ ಸಚಿವ ಸಂಪುಟ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿರುವುದು ಸರಿಯಲ್ಲ ಎಂದು ಹೇಳಿದರು.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂಪೂರ್ಣ ವಿರೋಧಿಯಾಗಿರುವ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷ ಬಹುಮತ ಪಡೆಯಲು ವಿಫಲವಾಗಿ ಆಡಳಿತಕ್ಕೆ ಬಂದ ಪಕ್ಷ ವಿಶ್ವಾಸಮತ ಗಳಿಸಲು ವಿಫಲವಾದರೆ ಎದುರಾಗುವ ಬಿಕ್ಕಟ್ಟಿಗೆ ಪರಿಹಾರ ರೂಪಿಸಿಲ್ಲ, ಇಂತಹ ಸಂದರ್ಭದಲ್ಲಿ ಮಧ್ಯಂತರ ಚುನಾವಣೆ ಸೂಕ್ತ ಪರಿಹಾರ ಆದರೆ ವಿಶ್ವಾಸಮತ ಸಾಬೀತುಪಡಿಸಲು ವಿಫಲವಾದ ಪಕ್ಷ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ನೀಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ದ್ರೋಹವಾಗಿದೆ ಎಂದು ಆಕ್ರೋಶಿಸಿದರು.
ದೇಶದಲ್ಲಿ ಒಂದೇ ಬಾರಿಗೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸುವ ಸಾಮರ್ಥ್ಯ ಚುನಾವಣಾ ಆಯೋಗಕ್ಕೆ ಇಲ್ಲ, ಚುನಾವಣಾ ವ್ಯವಸ್ಥೆ ದುಪ್ಪಟ್ಟು ಪ್ರಮಾಣದಲ್ಲಿ ವಿಸ್ತರಿಸಬೇಕಾದ ಅವಶ್ಯಕತೆ ಇರುತ್ತದೆ, ಇದನ್ನು ಆತುರದಿಂದ ಮಾಡುವ ಕೆಲಸವಲ್ಲ, ಹೊಸ ಚುನಾವಣಾ ವ್ಯವಸ್ಥೆ ಜಾರಿಗೆ ತರಬೇಕಾದರೆ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ, ಇದರ ಜೊತೆಗೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು, ಇದೆಲ್ಲವೂ ಸಹ ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಎನ್‌ಡಿಎ ಸರ್ಕಾರಕ್ಕೆ ಗೊತ್ತಿದ್ದರೂ ಜನರಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಸರ್ಕಾರದ ವೈಫಲ್ಯವನ್ನು ಮುಚ್ಚಿ ಹಾಕಲು ಮುಂದಾಗಿದ್ದಾರೆ ಹಾಗಾಗಿ ಒಂದು ದೇಶ ಒಂದು ಚುನಾವಣೆ ವಿಚಾರದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ತುರ್ತು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದಲ್ಲದೆ ಮಹಿಳೆ ಮೇಲೆ ಅತ್ಯಾಚಾರ ಮಾಡಿರುವ ಬಿಜೆಪಿ ಶಾಸಕ ಮುನಿರತ್ನ ರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಲು ರಾಜ್ಯ ಸರ್ಕಾರ ಮುಂದಾಗಬೇಕು, ಅದೇ ರೀತಿ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವ ಮುನಿರತ್ನ ಸಹಚರರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಎಂ ವಿ ಕೃಷ್ಣ, ನಿಂಗಪ್ಪ, ಶಿವಕುಮಾರ್, ಸಿದ್ದು, ಕೃಷ್ಣಪ್ಪ, ಸೋಮರಾಜ್ ನೇತೃತ್ವ ವಹಿಸಿದ್ದರು.