ನಾಗಮಂಗಲ :- ಖರೀದಿ ಕೇಂದ್ರದಲ್ಲಿ ಕಳೆದ ಒಂದು ವಾರದಿಂದ ರಾಗಿ ಖರೀದಿ ಮಾಡದೆ ವಿಳಂಬ ಮಾಡುತ್ತಿರುವುದರಿಂದ ರೊಚ್ಚಿಗೆದ್ದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶಿಸಿದರು.
ಪಟ್ಟಣದ ಹೊರ ವಲಯದ ಎಪಿಎಂಸಿ ಆವರಣದಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರದ ಎದುರು ರೈತರು ಪ್ರತಿಭಟನೆ ನಡೆಸಿ ಸಚಿವ ಚೆಲುವರಾಯಸ್ವಾಮಿ, ತಹಶೀಲ್ದಾರ್ ಹಾಗೂ ಅಧಿಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಕಿಡಿ ಕಾರಿದರು..
ಕಳೆದ ಒಂದು ವಾರದಿಂದ ಖರೀದಿ ಕೇಂದ್ರದಲ್ಲಿ ರಾಗಿ ಖರೀದಿ ಮಾಡದೆ ಕುಂಟುನೆಪ ಹೇಳುತ್ತಾ ಅಧಿಕಾರಿಗಳು ಕಾಲ ಹರಣ ಮಾಡುತ್ತಿದ್ದಾರೆ, ಇದರಿಂದ ರಾಗಿ ಹೊತ್ತ ನೂರಾರು ಟ್ರ್ಯಾಕ್ಟರ್ ಗಳು ನಿಂತಲ್ಲೇ ನಿಂತಿವೆ, ರೈತರು ದಿನಗಟ್ಟಲೆ ಕಾಯುತ್ತಾ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ,ಪ್ರತಿದಿನ ಒಂದು ಟ್ಯಾಕ್ಟರ್ ಗೆ ಮೂರರಿಂದ ನಾಲ್ಕು ಸಾವಿರ ರೂಪಾಯಿಗಳನ್ನು ಬಾಡಿಗೆ ಕಟ್ಟಬೇಕು ಖರೀದಿ ಮಾಡಿದ ರಾಗಿಗಳನ್ನು ತುಂಬಲು ಎಪಿಎಂಸಿ ಆವರಣದಲ್ಲಿ ಹತ್ತಾರು ಗೋದಾಮು ಗಳಿದ್ದರೂ ಕೂಡ ಅಧಿಕಾರಿಗಳು ರೈತರಿಗೆ ತೊಂದರೆ ಕೊಡುವ ಉದ್ದೇಶದಿಂದ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ರೈತ ಸಂಘದ ( ಮೂಲ ಸಂಘಟನೆ ) ಅಧ್ಯಕ್ಷ ಸುರೇಶ್ ಮಾತನಾಡಿ, ಅಧಿಕಾರಿಗಳಿಗೆ ರೈತರ ಕಷ್ಟಗಳು ಅರ್ಥವಾಗುವುದಿಲ್ಲ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರವು ಸಾಕಷ್ಟು ಅವ್ಯವಸ್ಥೆಗಳಿಂದ ತುಂಬಿದೆ ಕಳೆದ ಒಂದು ವಾರದಿಂದ ನೂರಾರು ಡಾಕ್ಟರ್ ಗಳು ಸ್ಥಳದಲ್ಲಿ ನಿಂತಿದ್ದು ಕಿಂಚಿತ್ತು ರೈತರ ಬಗ್ಗೆ ಕನಿಕರ ತೋರದೆ ದುರಹಂಕಾರದ ವರ್ತಿಸುತ್ತಿದ್ದಾರೆ, ಗೋದಾಮುಗಳಲ್ಲಿ ಇರಬೇಕಾದ ರಾಗಿಯನ್ನು ಬಯಲು ಶೆಡ್ ಗಳಲ್ಲಿ ಇಟ್ಟಿದ್ದಾರೆ ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಹಾಗೂ ಕೃಷಿ ಸಚಿವರು ರೈತರ ದನಿಯಾಗಿ ನಿಲ್ಲಬೇಕೆಂದು ಒತ್ತಾಯಿಸಿದರು.