ಮಂಡ್ಯ :- ಕೆ ಆರ್ ಎಸ್ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಜು. 8 ರಿಂದ ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಎಸ್ ಜಲಾಶಯದ ಮಟ್ಟ 100 ಅಡಿ ಕ್ಕಿಂತ ಹೆಚ್ಚುವರಿಯಾಗಿರುವುದರಿಂದ ಜು.6 ರಂದು ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ,ಜು. 8 ರಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
ಕಳೆದ ಸಾಲಿನಲ್ಲಿ ಬರಗಾಲದ ಹಿನ್ಬಲೆ ರೈತರ ಬೇಡಿಕೆಯಂತೆ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಜಲಾಶಯದಲ್ಲಿ ನೀರಿನ ಮಟ್ಟ 100 ಅಡಿ ತಲುಪಿದ ನಂತರ ನೀರು ಹರಿಸುವುದಾಗಿ ಭರವಸೆ ನೀಡಲಾಗಿತ್ತು.ವಿ.ಸಿ.ನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿದ್ದು, ರೈತರಿಗೆ ನೀರು ನೀಡಲು ತೊಂದರೆಯಾಗುತ್ತದೆ ಎಂದು ಹಲವಾರು ದೂರುಗಳು ಕೇಳಿ ಬಂದಿತ್ತು. ಇತ್ತೀಚೆಗೆ ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಾಲೆಗಳಿಗೆ ನೀರು ಹರಿಸಲು ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಾಗಿದೆ.
ಇದೀಗ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ನಾಲೆಗಳಿಗೆ ನೀರು ಬಿಡುಗಡೆ ಮಾಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿ ಕೊಂಡು ಉತ್ತಮ ಬೆಳೆ ಬೆಳೆಯಿರಿ. ರೈತರೊಂದಿಗೆ ಸರ್ಕಾರ ಸದಾ ಇದ್ದು, ಅವರ ಶ್ರೇಯೋಭಿವೃದ್ದಿಗೆ ಸದಾ ಚಿಂತಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.