ಮಂಡ್ಯ:- ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕರ್ನಾಟಕ ವಿರೋಧಿ ಧೋರಣೆ ಖಂಡಿಸಿ ಡಿ,ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಸರ್ ಎಂ ವಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ವೇದಿಕೆ ಕಾರ್ಯಕರ್ತರು ಕರ್ನಾಟಕಕ್ಕೆ ನ್ಯಾಯ ಕೊಡಿ ಎಂದು ಆಗ್ರಹಿಸುತ್ತಾ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕರಾಷ್ಟ್ರಪತಿಗಳಿಗೆ ಮನವಿ ಪತ್ರ ರವಾನಿಸಿದರು.
ನೆಲ-ಜಲ-ಭಾಷೆ-ಸಂಸ್ಕೃತಿ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯ ಆಗುತ್ತಿದೆ,ಕಳೆದ ಒಂದು ದಶಕದಿಂದ ಬಿಜೆಪಿ ನೇತೃತ್ವದ ಸರ್ಕಾರ ದೇಶದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯಕ್ಕೆ ನ್ಯಾಯವೇ ಸಿಗದಂತಾಗಿದೆ. ಕರ್ನಾಟಕದಿಂದ ಬಿಜೆಪಿ – ಜೆಡಿಎಸ್ ಮೈತ್ರಿಕೂಟದ ಸಂಸದರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದರೂ ಅನುದಾನ, ಅಧಿಕಾರ, ಅಭಿವೃದ್ಧಿ ಮತ್ತು ಆದ್ಯತೆ ವಿಚಾರದಲ್ಲಿt ಕರ್ನಾಟಕಕ್ಕೆ ದ್ರೋಹ ಆಗುತ್ತಿರುವುದು ದುರಂತವಾಗಿದ್ದು,ಒಕ್ಕೂಟ ವ್ಯವಸ್ಥೆಗೆ ಕಳಂಕ ತರುವ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿಯೇ ಕರ್ನಾಟಕ ತೆರಿಗೆ ಸಂಗ್ರಹದಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಆದರೆ ಕೇಂದ್ರದಿಂದ ತೆರಿಗೆ ಪಾಲು ಕೊಡುವಾಗ ಕೊನೆಯ ಸ್ಥಾನದಲ್ಲಿ ನಿಲ್ಲಿಸಿ ವಂಚನೆ ಮಾಡಲಾಗುತ್ತಿದೆ, 2024ರ ತೆರಿಗೆ ಹಂಚಿಕೆಯಲ್ಲಿ ಉತ್ತರಪ್ರದೇಶಕ್ಕೆ 31,039.84 ಕೋಟಿ ಕೊಟ್ಟರೆ ಬಿಹಾರಕ್ಕೆ 17.403.36 ಕೋಟಿ ನೀಡಿದೆ.ಆದರೆ ಕರ್ನಾಟಕಕ್ಕೆ ಕಡಿಮೆ ಹಣ ನೀಡಲಾಗಿದೆ,ತೆರಿಗೆ ಶೋಷಣೆ ನಡೆಯುತ್ತಿದ್ದರೂ ರಾಜ್ಯದ ಸಂಸದರ ಮೌನ ಅಧಿಕಾರ ದಾಹಕ್ಕೆ ಸಾಕ್ಷಿಯಾಗಿದೆ ಎಂದು ಸಂಸದರ ವಿರುದ್ಧ ಕಿಡಿಕಾರಿದರು.
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿಯೂ ಚುನಾವಣೋತ್ತರದಲ್ಲಿದ್ದ ದೆಹಲಿ, ಬಿಹಾರಗಳನ್ನ ಹೊತ್ತಿ ಮೆರೆಸಲಾಯಿತು. ಆದರೆ ಕರ್ನಾಟಕಕ್ಕೆ ಕನಿಷ್ಠ ಆದ್ಯತೆಯು ಸಿಗಲಿಲ್ಲ. ಯಾವುದೇ ವಿಶೇಷ ಅನುದಾನ ನೀಡಲಿಲ್ಲ. ಉತ್ತರ ರಾಜ್ಯಗಳ ಉದ್ದಾರದ ಉತ್ಸಾಹದಲ್ಲಿ ಸಾವಿರಾರು ಕೋಟಿಯನ್ನು ಅಲ್ಲಿಗೆ ಸುರಿದು ದಕ್ಷಿಣ ರಾಜ್ಯಗಳನ್ನು ಕಡೆಗಣಿಸಿದ್ದು, ಇದರಲ್ಲಿ ಕರ್ನಾಟಕವು ಸಹ ಕಡೆಗಣಿಸಲ್ಪಟ್ಟಿದೆ ಎಂದು ಹೇಳಿದರು.
ರಾಜ್ಯದ್ದಲ್ಲಿ ಬರ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ತಿಂಗಳುಗಟ್ಟಲೆ ಅಲೆದರೂ ಪರಿಹಾರ ನೀಡದೆ ಆಮಾನವೀಯವಾಗಿ ವರ್ತಿಸಿದ ಕೇಂದ ಸರ್ಕಾರ ದಿಂದ ನ್ಯಾಯಾಲಯದ ಮೂಲಕ ಪರಿಹಾರ ಪಡೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ,ಚಿಟಿಕೆ ಹೊಡೆಯುವುದರಲ್ಲಿ ಮೇಕೆದಾಟಿಗೆ ಅನುಮತಿ ಕೊಡಿಸುವುದಾಗಿ ಹೇಳಿದ್ದವರು ಮತ್ತು ಪ್ರಧಾನಿ ಕೈ ಹಿಡಿದು ಬರೆಸುವುದಾಗಿ ಭರವಸೆ ಕೊಟ್ಟವರು ಇದೀಗ ಉಲ್ಟಾ ಹೊಡೆದಿದ್ದಾರೆ. ಕಾವೇರಿ ವಿವಾದದ ಪರಿಹಾರದ ಭರವಸೆ ಆಗಿರುವ ಮೇಕೆದಾಟು ಯೋಜನೆ ನಿರ್ಮಾಣಕ್ಕೆ ಅಡ್ಡಿಪಡಿಸುತ್ತಿರುವ ಕೇಂದ್ರದ ಧೋರಣೆ ಅಕ್ಷಮ್ಯವಾಗಿದೆ ಎಂದರು.
ರಾಜ್ಯ ಸರ್ಕಾರದ ವಿರುದ್ಧ ಜಿದ್ದಿಗೆ ಬಿದ್ದಂತೆ, ದೆಹಲಿ ದೊರೆಗಳ ನಿರ್ದೇಶನದಲ್ಲಿ ನಡೆದುಕೊಂಡಂತೆ ಕಂಡುಬರುತ್ತಿರುವ ರಾಜ್ಯಪಾಲರು ಮೈಕೋಫೈನಾನ್ಸ್ ವಿರುದ್ಧದ ಸುಗ್ರೀವಾಜ್ಞೆಗೆ ಸಹಿ ಹಾಕದಿರುವುದು ಒಂದೆಡೆಯಾದರೆ, ಜಾರಿ ನಿರ್ದೇಶನಾಲಯ ದಾಳಿಗಳು ರಾಜಕೀಯ ಪ್ರೇರಣೆಯಿಂದ ಕೂಡಿವೆ ಅದೇ ರೀತಿ ಹಿಂದಿ ಹೇರಿಕೆ ನೆಲದ ಭಾಷೆಯ ದನಿಯನ್ನು ಅಡಗಿಸುತ್ತಿದ್ದು ಇಂತಹ ಸಾಂಸ್ಕೃತಿಕ ದಬ್ಬಾಳಿಕೆ ನಾಡಿನ ಸಿರಿವಂತಿಕೆಗೆ ಧಕ್ಕೆ ತರುತ್ತಿದೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಸರಣಿಯಾಗಿ ಕರ್ನಾಟಕದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು ಆದರೂ ಸಹ ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನದ ಮೇಲಿನ ನಂಬಿಕೆಯಿಂದ ಎಲ್ಲವನ್ನು ಸಹಿಸಿಕೊಳ್ಳುತ್ತಿದೆ,ಇದು ರಾಜ್ಯ ಸರ್ಕಾರದ ದೌರ್ಬಲ್ಯವಲ್ಲ ಎಂಬುದನ್ನು ಮನಗಂಡು ರಾಷ್ಟ್ರಪತಿ ಮಧ್ಯಪ್ರವೇಶಿಸಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಿ ನ್ಯಾಯ ಕೊಡಿಸಿ ಕೊಡಬೇಕೆಂದು ಆಗ್ರಹಿಸಿದರು.
ವೇದಿಕೆ ಅಧ್ಯಕ್ಷ ಎಲ್ ಸಂದೇಶ್, ಪ್ರಧಾನ ಕಾರ್ಯದರ್ಶಿ ಎಂ ಕೃಷ್ಣ, ಎನ್ ದೊಡ್ಡಯ್ಯ, ಸಿದ್ದಶೆಟ್ಟಿ, ವೀಣಾ ಶಂಕರ್, ಎಂ ಜಿ ಕಾಂತರಾಜು, ಮರಿಯಪ್ಪ,ಬೋರಪ್ಪ, ಕರವೇ ಎಚ್ ಡಿ ಜಯರಾಮು, ಕರ್ನಾಟಕ ಸಮ ಸಮಾಜದ ನರಸಿಂಹಮೂರ್ತಿ ನೇತೃತ್ವ ವಹಿಸಿದ್ದರು.