17.5 C
New York
Monday, October 7, 2024

Buy now

spot_img

ತೆಂಡೇಕೆರೆಯಲ್ಲಿ ಪರಿಶಿಷ್ಟ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

ಕೆ.ಆರ್.ಪೇಟೆ :- ತಾಲ್ಲೂಕಿನ ತೆಂಡೇಕೆರೆ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದ ಕುಟುಂಬವೊಂದಕ್ಕೆ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿರುವುದು ಬೆಳಕಿಗೆ ಬಂದಿದೆ.

ಸಾಮಾಜಿಕ ಬಹಿಷ್ಕಾರ ಜೊತೆಗೆ ಯಾವುದೇ ಮೂಲಸೌಕರ್ಯ ಕಲ್ಪಿಸದೆ ತೊಂದರೆ ನೀಡಿರುವ ಬಗ್ಗೆ ನೊಂದ ಕುಟುಂಬ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ದೂರು ಸಲ್ಲಿಸಿದೆ.
ತೆಂಡೇಕೆರೆ ಗ್ರಾಮದ ಸಿ.ರಾಮಸ್ವಾಮಿ, ಭಾರತಿ ರಾಮಸ್ವಾಮಿ ಮತ್ತು ಮಕ್ಕಳಾದ ಆರ್.ಅಮುದವೇಣಿ, ಆರ್.ಪದ್ಮಾವತಿ ನೋವು ತೋಡಿಕೊಂಡಿದ್ದು, ತೆಂಡೇಕೆರೆ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನಾವು ನಮಗೆ ಸೇರಿದ ಸ್ವಂತ ನಿವೇಶನದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ಆದರೆ ಅಕ್ಕಪಕ್ಕದವರು ನಮ್ಮ ಏಳಿಗೆಯನ್ನು ಸಹಿಸದೇ, ಗ್ರಾಮದ ಮಧ್ಯೆ ಒಳ್ಳೆಯ ಜಾಗದಲ್ಲಿ ದಲಿತರು ಮನೆ ಕಟ್ಟಿಕೊಂಡಿದ್ದಾರಲ್ಲ ಎಂಬ ಕಾರಣಕ್ಕಾಗಿ ವಿನಾಕಾರಣ ನಮಗೆ ತೊಂದರೆ ಕೊಡುತ್ತಿದ್ದಾರೆ. ನಮ್ಮ ಮನೆಗೆ ಹೋಗಲು ಇರುವ ಸರ್ಕಾರಿ ರಸ್ತೆಗೆ ಅಡ್ಡಲಾಗಿ ಕಲ್ಲುದಿಂಡುಗಳನ್ನು ಟ್ರಾಕ್ಟರ್ ಮೂಲಕ ತಂದು ಹಾಕಿರುತ್ತಾರೆ. ಇದರಿಂದ ಮನೆಗೆ ಹೋಗಲು ತೀವ್ರ ತೊಂದರೆಯಾಗುತ್ತಿದೆ.
ಅಷ್ಟೇ ಅಲ್ಲದೆ ಜಲಜೀವನ್ ಮಿಷನ್ ಯೋಜನೆ ವತಿಯಿಂದ ಕೊಳವೆ ಸಂಪರ್ಕ ನೀಡಲಾಗಿತ್ತು, ಕುಡಿಯುವ ನೀರಿನ ಪೈಪ್‌ಲೈನ್ ಅನ್ನು ಒಡೆದು ಹಾಕಿ ನೀರು ಮನೆಗೆ ಬಾರದಂತೆ ಮಾಡಿರುತ್ತಾರೆ. ಗ್ರಾಮ ಪಂಚಾಯಿತಿ ವತಿಯಿಂದ ಹಾಕಲಾಗಿರುವ ಬೀದಿಯ ವಿದ್ಯುತ್ ಕಂಬಕ್ಕೆ ವಿದ್ಯುತ್ ದೀಪ ಅಳವಡಿಸದೇ ತೊಂದರೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗ್ರಾಮದಲ್ಲಿ ನಡೆಯುವ ಹಬ್ಬ ಹರಿದಿನಗಳಲ್ಲಿ, ದೇವರ ಮೆರವಣಿಗೆ ಬರುವ ವೇಳೆ ಪೂಜೆ ಸಲ್ಲಿಸಲು ಹಾಗೂ ದೇವರಿಗೆ ಹಣ್ಣು ಕಾಯಿ ಅರ್ಪಿಸಲು ಸಹ ಅವಕಾಶ ನೀಡದೇ ತೊಂದರೆ ನೀಡಲಾಗುತ್ತಿದೆ. ಅಲ್ಲದೆ ಯಾರೂ ಸಹ ನಮ್ಮೊಂದಿಗೆ ಮಾತನಾಡದಂತೆ ಗ್ರಾಮದಲ್ಲಿ ಅಲಿಖಿತ ಬಹಿಷ್ಕಾರ ಹಾಕಿರುತ್ತಾರೆ. ಹಾಗಾಗಿ ನಮಗೆ ಗ್ರಾಮದಲ್ಲಿ ಬದುಕಲು ಹಕ್ಕೇ ಇಲ್ಲವೆಂಬಂತೆ ನಡೆಸಿಕೊಳ್ಳಲಾಗುತ್ತಿದೆ. ನಮ್ಮ ಕುಟುಂಬವು ಸುಮಾರು ೪೦-೫೦ವರ್ಷಗಳಿಂದಲೂ ತೆಂಡೇಕೆರೆ ಗ್ರಾಮದಲ್ಲಿ ವಾಸಿಸುತ್ತಿದ್ದೇವೆ ಆದರೂ ನಮ್ಮನ್ನು ಕಂಡರೆ ಪರದೇಶದವರು ಎಂಬಂತೆ ಅಮಾನವೀಯವಾಗಿ ಕಾಣಲಾಗುತ್ತಿದೆ. ನಾವು ದಲಿತರಾಗಿ ಹುಟ್ಟಿದ್ದೇ ತಪ್ಪು ಎಂಬಂತೆ ಗ್ರಾಮದಲ್ಲಿ ಎಲ್ಲಾ ರೀತಿಯಿಂದಲೂ ಕಿರುಕುಳ ನೀಡಲಾಗುತ್ತಿದೆ. ನಮಗೆ ರಕ್ಷಣೆ ನೀಡಬೇಕಾದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೆಲವು ಗ್ರಾಮಸ್ಥರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಮೂಲಸೌಕರ್ಯ ನೀಡದೇ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಸವರ್ಣೀಯರ ಪರವಾಗಿಯೇ ವಾದ ಮಾಡುತ್ತಾ ಮೂಲಸೌಕರ್ಯ ಕೊಡಿ ಎಂದು ಕೇಳಿದ್ದೇ ತಪ್ಪು ಎಂದು ನಮ್ಮ ಮೇಲೆಯೇ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸ್ ಅಧಿಕಾರಿಗಳು ಸಿ.ರಾಮಸ್ವಾಮಿ ಕುಟುಂಬಕ್ಕೆ ಅಗತ್ಯ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ ವ್ಯವಸ್ಥೆ, ಬೀದಿದೀಪ ಸೌಲಭ್ಯ ಒದಗಿಸಿಕೊಡುವಂತೆ ಪತ್ರ ಬರೆದರೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಹಾಗಾಗಿ ನಮಗೆ ಬದುಕಲು ಅಗತ್ಯವಾಗಿರುವ ಮೂಲ ಸೌಕರ್ಯಗಳನ್ನು ಒದಗಿಸಿಕೊಡದೇ ತೊಂದರೆ ನೀಡುತ್ತಿರುವ ತೆಂಡೇಕೆರೆ ಗ್ರಾಮ ಪಂಚಾಯಿತಿ ಪಿಡಿಓ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲು ಕಾರಣವಾಗಿರುವ ಅಕ್ಕಪಕ್ಕದ ಮನೆಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನಮಗೆ ನ್ಯಾಯ ಕೊಡಿಸಬೇಕು. ನಮಗೆ ಎಲ್ಲರಂತೆ ಬದುಕಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

 

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles