23.8 C
New York
Saturday, July 27, 2024

Buy now

spot_img

ಬಹುತ್ವ ಭಾರತಕ್ಕೆ ಕಾಂಗ್ರೆಸ್ ಅನಿವಾರ್ಯ : ಮರಿತಿಬ್ಬೇಗೌಡರನ್ನ ಗೆಲ್ಲಿಸಲು ಶಿಕ್ಷಕರಿಗೆ ಕರೆ

ಮಂಡ್ಯ: ಪ್ರಜಾಸತ್ತೆ ಉಳಿಸಲು, ಅನೂಚಾನವಾಗಿ ಎಲ್ಲರಿಗೂ ಉಚಿತ ಕಡ್ಡಾಯ ಶಿಕ್ಷಣದ ಗುರಿ ಸಾಧಿಸಲು, ಬಹುತ್ವ ಭಾರತದ ಎಲ್ಲಾ ಸಮುದಾಯಗಳು ಬದುಕಲು ಅವಕಾಶ ಒದಗಿಸುವ ಬಿಜೆಪಿಗೆ ಪರ್ಯಾಯವಾಗಿ ಇರುವುದು ಕಾಂಗ್ರೆಸ್ ಮಾತ್ರ.ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರನ್ನು ಬೆಂಬಲಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮತದಾರರಿಗೆ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿರುವ ಮರಿತಿಬ್ಬೇಗೌಡರನ್ನು ಬೆಂಬಲಿಸಿ ಮಾತನಾಡಿದ ಅವರು ಕೇಂದ್ರದ ಹೊಸ ಶಿಕ್ಷಣ ನೀತಿ ನಮ್ಮನ್ನು ನೂರು ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗುವಂತದ್ದು. ಈ ಸರ್ಕಾರ ತನ್ನದೇ ಆದ ಗುಪ್ತ ನೀತಿ(ಹಿಡನ್ ಅಜೆಂಡಾ) ಇಟ್ಟುಕೊಂಡು ಅನಕ್ಷರಸ್ಥರು,ಹಿಂದುಳಿದ ಸಮುದಾಯದವರು ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗುವಂತೆ ಮಾಡುತ್ತದೆ. ಶಿಕ್ಷಣ ಮಾರುಕಟ್ಟೆಯ ಸರಕಾಗುತ್ತದೆ. ಉನ್ನತ ಶಿಕ್ಷಣ ಪಡೆಯಲು ಆಗದಂತಹ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಕಿಡಿ ಕಾರಿದರು.
ಮರಿತಿಬ್ಬೇಗೌಡ ವಿದ್ಯಾರ್ಥಿ ಯಾದಾಗಿನಿಂದ ಹೋರಾಟದಿಂದ ಬಂದವರು. ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಶಿಕ್ಷಣ ವ್ಯವಸ್ಥೆ, ಶಿಕ್ಷಕರ ಪರವಾಗಿ ನಿಲ್ಲುವಂತಹವರು. ಈ ನಂಬಿಕೆಯ ನೆಲೆಗಟ್ಟಿನಲ್ಲಿ ಶಿಕ್ಷಕರು ಕಳೆದ ನಾಲ್ಕು ಬಾರಿ ಆಯ್ಕೆ ಮಾಡಿದ್ದಾರೆ. ನೂತನ ಪಿಂಚಣಿ ನೀತಿಯಿಂದ ನಿವೃತ್ತ ಶಿಕ್ಷಕರು,ನೌಕರರು ಬದುಕುವುದು ದುಸ್ತರವಾಗಿದೆ.ಎನ್‌ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಪದ್ಧತಿ ಜಾರಿಗೆ ತರಬೇಕು. ಆಳುವ ಪಕ್ಷವಿರುವ ಕಾರಣ ಶಿಕ್ಷಕರಿಗೆ ಅನುಕೂಲವಾಗುವುದರಿಂದ ಶಿಕ್ಷಕರು ಮರಿತಿಬ್ಬೇಗೌಡರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಚಿಂತಕ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ ಗೌಡರು ಶಿಕ್ಷಕ ವರ್ಗದ ಆಪ್ತ ಬಂಧು.ಶಿಕ್ಷಕರ ಅಭಿಮಾನ, ಗೌರವ, ನಂಬಿಕೆ ಉಳಿಸಲು ಯಾವುದೇ ಪಕ್ಷದಲ್ಲಿದ್ದರೂ ಹೋರಾಟ ಮಾಡಿದ್ದಾರೆ. ಇಂದಿನ ವ್ಯವಸ್ಥೆಯಲ್ಲಿ ಅವರ ಗೆಲುವು ಅನಿವಾರ್ಯವಾಗಬೇಕು. ಅನೇಕ ಅಧಿಕಾರಿಗಳಿಂದ ಶಿಕ್ಷಕರು ಶೋಷಣೆಗೆ ಒಳಗಾಗುವ ವ್ಯವಸ್ಥೆ ಇದೆ. ಅಂತಹುದನ್ನು ಪ್ರಶ್ನೆ ಮಾಡಲು,ಶಿಕ್ಷಕರ ಹಿತ ಕಾಪಾಡುವ ಧೀಮಂತಿಕೆ,ನಂಬಿಕೆ ಉಳಿಸಿಕೊಂಡಿದ್ದಾರೆ. ಅಕ್ರಮ ತಡೆಯುವ ಸಾಮರ್ಥ್ಯವಿದೆ. ಜಾತಿ ಮತ ಮೀರಿ ದುಡಿದಿರುವ ಮರಿತಿಬ್ಬೇಗೌಡರನ್ನು ಬೆಂಬಲಿಸಿ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜು ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಎನ್‌ಇಪಿ ಮೂಲಕ ಕುಲಗೆಡಿಸಲು ಹೊರಟಿದೆ. ಕೆಳವರ್ಗದ ಜನರಿಗೆ ಭವಿಷ್ಯ ಇಲ್ಲದ ರೀತಿ ಮಾಡಿದೆ. ಆದರೆ ರಾಜ್ಯ ಸರ್ಕಾರ ಎಸ್‌ಇಪಿ ಮೂಲಕ ಭರವಸೆ ಮೂಡಿಸಿದೆ. ಶಿಕ್ಷಕರಿಗೆ ನೂರಾರು ಸಮಸ್ಯೆಗಳಿವೆ. ಬೋಧನೆಯನ್ನು ಮಾಡಲು ಸ್ವಾತಂತ್ರ‍್ಯ ಇಲ್ಲ. ಶಿಕ್ಷಕರಿಗೆ ಮಾನಸಿಕ ನೆಮ್ಮದಿ ಮುಖ್ಯ. ಕಳೆದ ಬಿಜೆಪಿ ಸರ್ಕಾರ ಶಿಕ್ಷಕರಿಗೆ ನೀಡಿದ್ದ ಕಾಲ್ಪನಿಕ ವೇತನ ಬಡ್ತಿಯನ್ನು ತಡೆಹಿಡಿಯಲು ಆದೇಶಿಸಿತು. ಇದನ್ನು ಸರಿಪಡಿಸಲು ಮರಿತಿಬ್ಬೇಗೌಡ ರಂತ ಪ್ರತಿನಿಧಿಯ ಅವಶ್ಯಕತೆಯಿದೆ. ಶಿಕ್ಷಕರು ದಯವಿಟ್ಟು ಆಮಿಷಗಳಿಗೆ ಬಲಿಯಾಗದೇ, ಮತವನ್ನು ಮಾರಿಕೊಳ್ಳದೇ, ಆತ್ಮಸಾಕ್ಷಿಯಿಂದ ಪ್ರಾಮಾಣಿಕ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದರು.
ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಭೈರಮಂಗಲ ರಾಮೇಗೌಡ ಮಾತನಾಡಿ ವಿಧಾನ ಪರಿಷತ್ತು ಎಂದರೆ ಘನತೆ, ಸತ್ವ, ಸಾತ್ವಿಕ ಹೋರಾಟದ ವೇದಿಕೆ. ಇದು ಮಾದರಿಯಾಗಿ ನಿರ್ಮಾಣವಾಗಬೇಕು. ವಿಧಾನಸಭೆಯ ಇನ್ನೊಂದು ರೂಪವಾಗಬಾರದು. ಆದರ್ಶ ವ್ಯಕ್ತಿಗಳ ಕೊರತೆ ಎದುರಿಸುತ್ತಿರುವ ಪರಿಷತ್ತು ಆದರ್ಶಕ್ಕೆ ಮೇಲ್ಪಂಕ್ತಿ ಹಾಕುವವರನ್ನು ಹೊಂದಬೇಕು. ಶಿಕ್ಷಕರ ಗೋಳು ಕೇಳುವವರಿಲ್ಲ ಅತಿಥಿ, ಅರೆಕಾಲಿಕ, ಗುತ್ತಿಗೆಯಂತ ಶಿಕ್ಷಕರ ಸಮಸ್ಯೆಗಳನ್ನು ವಿಚಾರಿಸುವವರು ಕಡಿಮೆ. ಶಿಕ್ಷಕರು ತಮ್ಮ ಹಿತ ಕಾಪಾಡಿಕೊಳ್ಳಲು ಮರಿತಿಬ್ಬೇಗೌಡರನ್ನು ಬೆಂಬಲಿಸಬೇಕು ಎಂದರು.
ಸಂಸ್ಕೃತಿ ಚಿಂತಕ, ಸಾಹಿತಿ, ಬಂಜಗೆರೆ ಜಯಪ್ರಕಾಶ್ ಮಾತನಾಡಿ ಬಿಜೆಪಿ ಶಿಕ್ಷಕರ ಆಲೋಚನಾ ಶಕ್ತಿ,ಸೃಜನಶೀಲತೆಯನ್ನು ಕೊಲ್ಲುವ ವ್ಯವಸ್ಥೆ ರೂಪಿಸುತ್ತಿದೆ. ಇಂತಹ ಶಿಕ್ಷಣ ಪ್ರಜಾಪ್ರಭುತ್ವಕ್ಕೆ ಪೂರಕವಲ್ಲ,ಮಾರಕ. ಶಿಕ್ಷಕರಿಗೆ ಮುಕ್ತ ಅವಕಾಶವಿರಬೇಕು. ಸಮಾಜ ಕಟ್ಟುವ ನಿಟ್ಟಿನಲ್ಲಿ ಯೋಚಿಸಿ ಜನಪರವಾಗಿರುವ ಮರಿತಿಬ್ಬೇಗೌಡರ ಗೆಲುವು ಶಿಕ್ಷಣ ಕ್ಷೇತ್ರದ ಆರೋಗ್ಯಕ್ಕೆ ಪೂರಕ ಎಂದರು.
ಸುದ್ದಿಗೋಷ್ಠಿಯಲ್ಲಿ ಸಾಹಿತಿ ಕಾ.ತ.ಚಿಕ್ಕಣ್ಣ,ಕರ್ನಾಟಕ ಬಂಜಾರ ಅಭಿವೃದ್ಧಿ ಅಕಾಡೆಮಿ ಅಧ್ಯಕ್ಷ ಡಾ.ಎ.ಆರ್.ಗೋವಿಂದಸ್ವಾಮಿ,ಉಪನ್ಯಾಸಕ ಕೂಡ್ಲೂರು ವೆಂಕಟಪ್ಪ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles