ಮಳವಳ್ಳಿ : ಬಿತ್ತನೆ ಬೀಜಗಳ ದುಪ್ಪಟ್ಟು ಬೆಲೆ ಏರಿಕೆ, ಸಮರ್ಪಕ ವಾಗಿ ಬರ ಪರಿಹಾರ ವಿತರಣೆ ಮಾಡುವಲ್ಲಿ ನಿರ್ಲಕ್ಷ್ಯ ಸೇರಿದಂತೆ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಬಿಜೆಪಿ ರೈತ
ಮೋರ್ಚಾ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.
ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಎದುರು ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮುಂಭಾಗ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿ ಸಿದರು.
ಕೃಷಿ ಇಲಾಖಾ ಕಚೇರಿ ವರೆಗೆ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗಿ ಕೃಷಿ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು.
ಬಿಜೆಪಿ ರೈತಮೋರ್ಚಾ ರಾಜ್ಯ ಕಾರ್ಯ ದರ್ಶಿ ಹೆಚ್ ಆರ್ ಅಶೋಕ್ ಕುಮಾರ್ ಮಾತನಾಡಿ ಬರದ ಭವಣೆಯಿಂದ ತತ್ತರಿಸಿರುವ ಜಿಲ್ಲೆಯ ರೈತರಿಗೆ ಉಚಿತವಾಗಿ ಬಿತ್ತನೆ ಬೀಜಗಳನ್ನು ನೀಡಬೇಕಾದ ರಾಜ್ಯ ಕಾಂಗ್ರೆಸ್ ಸರ್ಕಾರ ಬಿತ್ತನೆ ಬೀಜಗಳ ದರವನ್ನು ದುಪ್ಪಟ್ಟು ಏರಿಕೆ ಮಾಡಿ ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಕಿಡಿ ಕಾರಿದರು.
ಬರ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮೂರುವರೆ ಸಾವಿರ ಕೋಟಿ ಹಣವನ್ನು ಈ ವರೆಗೂ ಸಂಕಷ್ಟಕ್ಕೆ ಒಳಗಾದ ರೈತರಿಗೆ ಬಿಡುಗಡೆ ಮಾಡದ ಸಿ ಎಂ ಸಿದ್ದರಾಮಯ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಹಿಂದಿನ ಬಿಜೆಪಿ ಸರ್ಕಾರ ವಿ ಸಿ ನಾಲೆಯ ಆದುನೀಕರಣಕ್ಕಾಗಿ 3.500 ಕೋಟಿ ಹಣ ಬಿಡುಗಡೆ ಮಾಡಿದ್ದು ಈ ಕಾಮಗಾರಿಯನ್ನು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ನೀಡಿದ್ದು ಸರಿಯಾಗಿ ಕಾಮಗಾರಿ ಮಾಡದೆ ಕಳಪೆ ಕೆಲಸದ ಮೂಲಕ ಸರ್ಕಾರ ಸಾರ್ವಜನಿಕ ಹಣದ ಕೊಳ್ಳೆ ಹೊಡೆಯುತ್ತಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಮುಖಂಡರಾದ ಅಶೋಕ್ ಜಯರಾಮ್, ಜೋಗಿಗೌಡ, ತಾಲೂಕು ಬಿಜೆಪಿ ಅಧ್ಯಕ್ಷರಾದ ಎಂ ಎನ್ ಕೃಷ್ಣ, ರೈತಮೋರ್ಚ ಅಧ್ಯಕ್ಷ ಶಶಿ, ಮುಖಂಡರಾದ ಮುನಿರಾಜು, ಕೆ ಸಿ ನಾಗೇಗೌಡ, ಪುರಸಭಾ ಸದಸ್ಯರಾದ ಪುಟ್ಟಸ್ವಾಮಿ, ರವಿ ಹೆಚ್ ಬಸವರಾಜು, ಮತ್ತಿತರಿದ್ದರು.