ಮಂಡ್ಯ : ಆಹಾರ ಸಂಸ್ಕರಣಾ ಘಟಕಗಳು ಸೇರಿದಂತೆ ಹಲವು ಉದ್ದಿಮೆಗಳಿಗೆ ನೀಡಿರುವ ಮಾರುಕಟ್ಟೆ ಶುಲ್ಕ ವಿನಾಯಿತಿಯ ಅವಧಿ ಮುಗಿದಿದ್ದರೆ ಮತ್ತೆ ವಿಸ್ತರಣೆ ಮಾಡುವುದು ಬೇಡ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಎಪಿಎಂಸಿಗಳ ಪ್ರಗತಿ ಪರಿಶೀಲನೆ ನಡೆಸಿ ಎಪಿಎಂಸಿಗಳನ್ನು ಸದೃಢಗೊಳಿಸಲು ಕಠಿಣ ಕ್ರಮ ಅನಿವಾರ್ಯ. ಮಾರುಕಟ್ಟೆ ಶುಲ್ಕ ವಿನಾಯಿತಿಯನ್ನು ಯಾವ ಯಾವ ಸ್ವರೂಪದ ಉಮೆಗಳಿಗೆ ನೀಡಲಾಗಿದೆ. ಇದರಿಂದ ಎಪಿಎಂಸಿಗೆ ವಾರ್ಷೀಕ ಎಷ್ಟು ನಷ್ಟ ಉಂಟಾಗುತ್ತಿದೆ ಎಂಬ ಬಗ್ಗೆ ಸಮೀಕ್ಷೆ ಮಾಡಿ ವರದಿ ಸಿದ್ದಪಡಿಸಿ ಎಂದು ಸೂಚಿಸಿದರು.
ಕೈಗಾರಿಕಾ ನೀತಿ ರೂಪಿಸುವ ವೇಳೆ ಆಹಾರ ಸಂಸ್ಕರಣಾ ಘಟಕಗಳು ರೈತರಿಂದ ನೇರವಾಗಿ ಕೃಷಿ ಉತ್ಪನ್ನ ಖರೀದಿಗೆ ಅನುಮತಿ ನೀಡಿರಬಹುದು. ಇದರಿಂದ ಅವರಿಗೆ ಎಪಿಎಂಸಿ ಶುಲ್ಕದಲ್ಲಿ ವಿನಾಯಿತಿ ಸಿಗಲಿದೆ. ಆದರೆ ಈ ವಿನಾಯಿತಿ ಅವಧಿ ಮುಗಿದ ನಂತರ ಮತ್ತೆ ವಿಸ್ತರಣೆ ಮಾಡಬಾರದು. ಜಿಲ್ಲೆಯ ಒಂದು ಆಹಾರ ಸಂಸ್ಕರಣಾ ಘಟಕ್ಕೆ ನೀಡಿರುವ ವಿನಾಯಿತಿಯಿಂದ ಎಪಿಎಂಸಿಗೆ ವಾರ್ಷೀಕ 21 ಲಕ್ಷ ರೂ. ಆದಾಯ ತಪ್ಪಿದರೆ ಇಡೀ ರಾಜ್ಯದ ಎಲ್ಲ ಎಪಿಎಂಸಿಗಳಿಗೆ ಈ ರೀತಿ ಎಷ್ಟು ಆದಾಯ ಕೈ ತಪ್ಪಬಹುದು ಎಂಬ ಅಂದಾಜು ಮಾಡಿ ಎಂದು ಹೇಳಿದರು.
ಆಹಾರ ಸಂಸ್ಕರಣಾ ಘಟಕಗಳಿಗೆ ನಿಗದಿತ ಪ್ರಮಾಣಕ್ಕೆ ಮಾತ್ರ ಮಾರುಕಟ್ಟೆ ಶುಲ್ಕ ವಿನಾಯಿತಿ ನೀಡಲಾಗಿರುತ್ತದೆ. ಸರ್ಕಾರ ನೀಡಿರುವ ಈ ಸೌಲಭ್ಯ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ ಆದ್ದರಿಂದ ಈ ಘಟಕಗಳು ಬಳಕೆ ಮಾಡುವ ವಿದ್ಯುತ್ ಪ್ರಮಾಣ ಮತ್ತು ಜಿಎಸ್‌ಟಿ ಪಾವತಿಯ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ದುರ್ಬಳಕೆಯಾಗಿದ್ದರೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಬಹುತೇಕ ಎಪಿಎಂಸಿಗಳಲ್ಲಿ ಗೋದಾಮುಗಳು ಖಾಲಿ ಇದ್ದರೂ ಅವುಗಳನ್ನು ಬಾಡಿಗೆ ಕೊಡಲು ನಿರ್ಲಕ್ಷ್ಯ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕೆಲವು ಕಡೆ ಬಾಡಿಗೆ ಕೊಟ್ಟಿದ್ದರೂ, ಈ ಮೊತ್ತ ಗೋದಾಮುಗಳ ಸುಣ್ಣ-ಬಣ್ಣಕ್ಕೂ ಆಗುತ್ತಿಲ್ಲ. ಕಾರ್ಯದರ್ಶಿಗಳು ಇದನ್ನು ಆದ್ಯತೆ ಮೇಲೆ ಪರಿಗಣಿಸಿ ಖಾಲಿ ಇರುವ ಗೋದಾಮುಗಳನ್ನು ಬಾಡಿಗೆ ಕೊಡಲು ಕ್ರಮ ಕೈಗೊಳ್ಳಬೇಕು. ದುಸ್ಥಿತಿಯಲ್ಲಿರುವ ಗೋದಾಮುಗಳನ್ನು ನೆಲಸಮ ಮಾಡಿ ಈ ನಿವೇಶನವನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಯೋಜನೆ ರೂಪಿಸಿ ಎಂದು ಸಲಹೆ ಮಾಡಿದರು.
ಜಿಲ್ಲೆಯ ಕೆಲವು ಎಪಿಎಂಸಿಗಳು ನಿಗದಿಪಡಿಸಿರುವ ಗುರಿ ಸಾಧನೆಯಲ್ಲಿ ವಿಫಲವಾಗಿವೆ. ಮಾರುಕಟ್ಟೆಗೆ ಯಾವ ಯಾವ ಕೃಷಿ ಉತ್ಪನ್ನಗಳು ಆವಕವಾಗುತ್ತಿವೆ. ಪ್ರಮುಖ ಉತ್ಪನ್ನ ಯಾವುದು ಎಂದು ಪ್ರಶ್ನಿಸಿದ ಸಚಿವರು, ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ಜಿಲ್ಲೆಯ ಸಾಗುವಳಿ ಪ್ರದೇಶ ಹಾಗೂ ಯಾವ ಯಾವ ಬೆಳೆಯನ್ನು ಎಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತದೆ ಎಂಬ ಮಾಹಿತಿ ಸಂಗ್ರಹ ಮಾಡಬೇಕು. ಈ ಮಾಹಿತಿ ಎಪಿಎಂಸಿಗಳಲ್ಲಿ ಇದ್ದರೆ ಮಾತ್ರ ವ್ಯವಸ್ಥಿತವಾಗಿ ಕಾರ್ಯನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಕೆಲವು ಎಪಿಎಂಸಿಗಳಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಗತ್ಯ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅನುಮತಿ ನೀಡಿ ಎಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. ಸೇವೆಯಿಂದ ನಿವೃತ್ತಿ ಹೊಂದಿರುವ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ಉಪನಿರ್ದೇಶಕರನ್ನೇ ನೇಮಕ ಮಾಡಿಕೊಳ್ಳುವುದು ಸೂಕ್ತ ಎಂದು ಹೇಳಿದರು. ಎಪಿಎಂಸಿ ಕಾರ್ಯದರ್ಶಿಗಳು ನೀಡುವ ಪ್ರಗತಿಯ ವರದಿಯನ್ನು ಗಮನಿಸಿದರೆ ಇಡೀ ಎಪಿಎಂಸಿಯ ಚಿತ್ರಣ ಸ್ಪಷ್ಟವಾಗುವಂತೆ ಇರಬೇಕು. ಆದ್ದರಿಂದ ನಿರ್ಧಿಷ್ಟ ರೂಪದಲ್ಲಿ ವರದಿ ನೀಡಲು ಕೇಂದ್ರ ಕಚೇರಿಯಿಂದಲೇ ನಮೂನೆಯನ್ನು ಕಳುಹಿಸಿಕೊಡಿ ಎಂದು ಸೂಚಿಸಿದರು.
ಶಾಸಕ ರವಿಕುಮಾರ್, ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ, ಹೆಚ್ಚುವರಿ ನಿರ್ದೇಶಕ (ಆಡಳಿತ) ನಜೀಬುಲ್ಲಾಖಾನ್, ಜಿಲ್ಲೆಯ ಎಲ್ಲ ಎಪಿಎಂಸಿಗಳ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.