ಮಂಡ್ಯ :- ದೇಶದ ರಾಜಧಾನಿ ದೆಹಲಿಯಲ್ಲಿ ನಿರಂತರ ಹೋರಾಟ ನಡೆಸುತ್ತಿರುವ ರೈತರ ಬೇಡಿಕೆಗಳ ಬಗ್ಗೆ ಸಂಸತ್ ದಲ್ಲಿ ಖಾಸಗಿ ಮಸೂದೆ ಮಂಡಿಸಲು ಮಂಡ್ಯ ಕ್ಷೇತ್ರದ ಸಂಸದರೂ ಆದ ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್ ಡಿ ಕುಮಾರಸ್ವಾಮಿ ಮುಂದಾಗಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಿಯೋಗ ಮನವಿ ಮಾಡಿತು.
ಮಂಡ್ಯದಲ್ಲಿ ಸಂಸದರ ಕಚೇರಿಗೆ ತೆರಳಿದ ನಿಯೋಗ ಸಚಿವ ಎಚ್ ಡಿ ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್ ಎಲ್ ನಾಗರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿತು.
ದೇಶದ ರಾಜಧಾನಿ ದೆಹಲಿಯಲ್ಲಿ ರೈತರು ಕೃಷಿ ಕಾನೂನುಗಳ ವಿರುದ್ಧ ಮತ್ತು ಎಂಎಸ್‌ಪಿ ದರದಲ್ಲಿ ಬೆಳೆಗಳ ಖರೀದಿಗೆ ಖಾತರಿ ಕಾನೂನನ್ನು ಜಾರಿಗೆ ತರಲು ಐತಿಹಾಸಿಕ ಚಳವಳಿಯನ್ನು ನಡೆಸಿದ ಪರಿಣಾಮ ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಹಿಂಪಡೆದು ಎಂಎಸ್‌ಪಿ ಗ್ಯಾರಂಟಿ ಕಾನೂನು ಮಾಡಲು ಸಮಿತಿ ರಚನೆ ಮಾಡುವುದಾಗಿ ಘೋಷಿಸಿತ್ತು. ಆದರೆ ಇದುವರೆಗೆ ಕಾನೂನು ರೂಪಿಸದ ಕೇಂದ್ರ ಸರ್ಕಾರ ವಿಳಂಬ ನೀತಿ ಮಾಡುತ್ತಿದೆ,
ಕೇಂದ್ರ ಸರ್ಕಾರದ ಸಚಿವರ ಜತೆ ನಾಲ್ಕು ಸುತ್ತಿನ ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ, ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸಲು ಹೊರಟಿದ್ದ ರೈತರ ಮೇಲೆ ಹರಿಯಾಣದ ಬಿಜೆಪಿ ಸರ್ಕಾರ ಪೊಲೀಸರ ಮೂಲಕ ನಡೆಸಿದ ಹಿಂಸಾಚಾರದಲ್ಲಿ ರೈತ ಶುಭಾಕರನ್ ಸಿಂಗ್ ಹುತಾತ್ಮರಾದರು, ಐವರು ರೈತರು ದೃಷ್ಟಿ ಕಳೆದುಕೊಂಡು 433 ರೈತರು ಗಾಯಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ಮುನ್ನ ಜಾತ್ಯಾತೀತ ಜನತಾದಳ ಪ್ರಣಾಳಿಕೆಯಲ್ಲಿ ರೈತರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಇತ್ಯರ್ಥ ಮಾಡುವ ಆಸ್ಪಾಸನೆ ನೀಡಿತ್ತು ಹಾಗಾಗಿ ಎಚ್ ಡಿ ಕುಮಾರಸ್ವಾಮಿ ಸಂಸದರಾಗಿ ಚುನಾಯಿತರಾದರು,ಆದ್ದರಿಂದ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಖಾಸಗಿ ಮಸೂದೆಗಳನ್ನು ಮಂಡಿಸುವುದು ಜವಾಬ್ದಾರಿ ಎಂಬುದನ್ನು ಅರಿಯಬೇಕು ಹಾಗೊಮ್ಮೆ ರೈತರು ಮತ್ತು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಖಾಸಗಿ ಮಸೂದೆಗಳನ್ನು ಮಂಡಿಸದಿದ್ದರೆ ಎಚ್ ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ಅಭಿಪ್ರಾಯಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಯಬೇಕಾಗುತ್ತದೆ ಎಂದಿದ್ದಾರೆ.
ರೈತರಿಗೆ ಎಂಎಸ್‌ಪಿ ದರದಲ್ಲಿ ಎಲ್ಲಾ ಬೆಳೆಗಳನ್ನು ಖರೀದಿಸಲು ಖಾತರಿ ಕಾನೂನು ರೂಪಿಸಬೇಕು ಮತ್ತು ಡಾ.ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಬೆಲೆಗಳನ್ನ ನಿಗದಿಪಡಿಸಬೇಕು,ರೈತರು ಮತ್ತು ಕೂಲಿಕಾರರನ್ನು ಸಂಪೂರ್ಣ ಸಾಲದಿಂದ ಮುಕ್ತಗೊಳಿಸಬೇಕು,ಭಾರತವು ವಿಶ್ವ ವ್ಯಾಪಾರ ಒಪ್ಪಂದ ಸಂಸ್ಥೆಯಿಂದ ಹೊರಬರಬೇಕು ಮತ್ತು ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳನ್ನು ನಿಷೇಧಿಸಬೇಕು, 60 ವರ್ಷ ತುಂಬಿದ ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು,ಫಸಲ್ ಭೀಮ ಬೆಳೆ ವಿಮಾ ಯೋಜನೆಯಲ್ಲಿ ತಿದ್ದುಪಡಿಗಳನ್ನು ಮಾಡಬೇಕು,ನಕಲಿ ಬಿತ್ತನೆ ಬೀಜಗಳು, ಕೀಟನಾಶಕಗಳು ಮತ್ತು ರಸಗೊಬ್ಬರಗಳನ್ನು ತಯಾರಿಸುವ ಕಂಪನಿಗಳಿಗೆ ಕಠಿಣ ಶಿಕ್ಷೆ ಮತ್ತು ದಂಡವನ್ನು ವಿಧಿಸಲು ನಿಬಂಧನೆಗಳನ್ನು ಮಾಡಬೇಕು ಮತ್ತು ಬೀಜಗಳ ಗುಣಮಟ್ಟವನ್ನು ಸುಧಾರಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.
ಬರ,ಅತಿವೃಷ್ಟಿ, ಮಳೆ ಹಾನಿ, ಪ್ರಕೃತಿ ವಿಕೋಪ ಪರಿಹಾರ ಎನ್ ಡಿ ಆರ್ ಎಫ್ ಮಾನದಂಡ ತಿದ್ದುಪಡಿ ಮಾಡಬೇಕು ವೈಜ್ಞಾನಿಕವಾಗಿ ಪರಿಹಾರ ನಿಗದಿ ಮಾಡುವಂತಾಗಬೇಕುಹರಿಯಾಣದಲ್ಲಿ ರೈತರ ಆಂದೋಲನ-2ರ ವೇಳೆ ಗುಂಡು ಹಾರಿಸಿ ರೈತರಿಗೆ ಚಿತ್ರಹಿಂಸೆ ನೀಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯೆತರ) ದಕ್ಷಿಣ ಭಾರತ ಸಂಚಾಲಕ,ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್,ಕನ್ನಡ ಸೇನೆ ಜಿಲ್ಲಾಧ್ಯಕ್ಷ ಹೆಚ್ ಸಿ ಮಂಜುನಾಥ್, ಬಿ ಮಹದೇವಪ್ಪ, ಮಹೇಶ್, ಚೋಟ್ಟನಹಳ್ಳಿ ಶಂಕರೇಗೌಡ, ಹತ್ತಳ್ಳಿ ದೇವರಾಜ್. ಲಕ್ಷ್ಮಿಪುರ ವೆಂಕಟೇಶ್,ಕಿರಗಸೂರು ಶಂಕರ, ನಾಗರಾಜ್,ನೀಲಕಂಠಪ್ಪ ಇತರರಿದ್ದರು.