ಮಂಡ್ಯ :- ಕಾವೇರಿ ನೀರಾವರಿ ನಿಗಮದ ಕೃಷ್ಣರಾಜಸಾಗರ ಆಧುನಿಕರಣ ಮತ್ತು ಮಧ್ಯಮ ನೀರಾವರಿ ಯೋಜನೆಗಳ ವೃತ್ತ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟಾಸ್ಕ್ ವರ್ಕ್ (ಸೌಡಿ ) ದಿನಗೂಲಿ ನೌಕರರಿಗೆ ಕಳೆದ ಏಳು ತಿಂಗಳಿಂದ ವೇತನ ಪಾವತಿ ಸದ ಹಿನ್ನೆಲೆಯಲ್ಲಿ ನೌಕರರು ಮಂಡ್ಯದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.
ನಗರದ ಕಾವೇರಿ ಭವನ ಆವರಣದಲ್ಲಿ ಟಾಸ್ಕ್ ವರ್ಕ್ ದಿನಗೂಲಿ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಧರಣಿ ನಡೆಸಿ ಬಾಕಿ ವೇತನ ಪಾವತಿಗೆ ಆಗ್ರಹಿಸಿದರು.
ಸುಮಾರು 650 ನೌಕರರು ಹೊರಗುತ್ತಿಗೆ ಆಧಾರದಡಿ ಕರ್ತವ್ಯ ನಿರ್ವಹಿಸುತ್ತಿದ್ದು ಆದರೆ ಕಳೆದ ಫೆಬ್ರವರಿ ಒಂದರಿಂದ ವೇತನ ಪಾವತಿ ಮಾಡಿರುವುದಿಲ್ಲ ಇದರಿಂದ ಕುಟುಂಬ ನಿರ್ವಹಣೆಗೆ ಕಷ್ಟಕರವಾಗಿದ್ದು, ಮಕ್ಕಳನ್ನು ಶಾಲಾ – ಕಾಲೇಜಿಗೆ ಸೇರ್ಪಡೆ ಮಾಡಲು ತೊಂದರೆಯಾಗುತ್ತಿದೆ ಈ ಕೂಡಲೇ ಅಧಿಕಾರಿಗಳು ಬಾಕಿ ಇರುವ ವೇತನ ಪಾವತಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಶಿವಲಿಂಗಯ್ಯ, ಕಾರ್ಯದರ್ಶಿ ರಾಮೇಗೌಡ, ಮಹೇಶ್, ಎಸ್ ಎಂ ರವಿ, ವೈರಮುಡಿ, ಸತೀಶ್,ಜೆ. ನಾಗರಾಜ್ ನೇತೃತ್ವ ವಹಿಸಿದ್ದರು.