Friday, May 9, 2025
Homeಜಿಲ್ಲೆಉಪ ವಿಭಾಗಾಧಿಕಾರಿ ಅಮಾನತ್ತಿಗೆ ಆಗ್ರಹಿಸಿ ವಕೀಲರ ಪ್ರತಿಭಟನೆ

ಉಪ ವಿಭಾಗಾಧಿಕಾರಿ ಅಮಾನತ್ತಿಗೆ ಆಗ್ರಹಿಸಿ ವಕೀಲರ ಪ್ರತಿಭಟನೆ

ಮಂಡ್ಯ :- ಜಮೀನು ವ್ಯಾಜ್ಯ ಪ್ರಕರಣ ವಿಚಾರವಾಗಿ ಭೇಟಿ ಮಾಡಿ ಚರ್ಚಿಸಲು ಮುಂದಾದ ವಕೀಲ ಅಮಿತ್ ರವರ ಜೊತೆ ಅಧಿಕಾರ ದುರ್ಬಳಕೆ ಮಾಡಿಕೊಂಡು ದರ್ಪ ಪ್ರದರ್ಶಿಸಿರುವ ಪಾಂಡವಪುರ ಉಪ ವಿಭಾಗಾಧಿಕಾರಿ ಕೆ ಆರ್ ಶ್ರೀನಿವಾಸ್ ರನ್ನು ಸೇವೆಯಿಂದ ಅಮಾನತು ಮಾಡುವಂತೆ ಒತ್ತಾಯಿಸಿ ವಕೀಲರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ನ್ಯಾಯಾಲಯ ಕಲಾಪದಿಂದ ಹೊರಗುಳಿದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪಾಂಡವಪುರ ಉಪ ವಿಭಾಗಾಧಿಕಾರಿ ದುರ್ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕೆ ಆರ್ ಪೇಟೆಯ ವಕೀಲ ಅಮಿತ್ ಎರಡು ದಿನಗಳ ಹಿಂದೆ ಜಮೀನು ವ್ಯಾಜ್ಯಪ್ರಕರಣ ವಿಚಾರವಾಗಿ ಪಾಂಡವಪುರದ ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ ಕೆ ಆರ್ ಶ್ರೀನಿವಾಸ್ ರನ್ನು ಭೇಟಿಯಾಗಿ ಚರ್ಚೆ ಮಾಡುತ್ತಿದ್ದಾಗ ಸಮರ್ಪಕವಾಗಿ ಸ್ಪಂದಿಸದೆ,ಅಧಿಕಾರ ದುರ್ಬಳಕೆ ಮಾಡಿಕೊಂಡು ದರ್ಪದಿಂದ ವರ್ತಿಸಿ ಕನಿಷ್ಠ ಗೌರವವನ್ನು ನೀಡದೆ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿ ವಕೀಲನನ್ನು ವಶಕ್ಕೆ ನೀಡಿರುವುದು ಮತ್ತು ವಕೀಲ ಅಮಿತ್ ರನ್ನ ಪೊಲೀಸರು ಠಾಣೆಯಲ್ಲಿ ಸುಮಾರು ಮೂರು ತಾಸು ಕಾನೂನು ಬಾಹಿರವಾಗಿ ಬಂಧನದಲ್ಲಿ ಇರಿಸಿ ದೌರ್ಜನ್ಯ ಎಸಗಿರುವುದು ಅಪರಾಧವಾಗಿದೆ ಎಂದು ಅಧಿಕಾರಿಗಳ ದುರ್ವರ್ತನೆ ವಿರುದ್ಧ ಕಿಡಿಕಾರಿದರು.
ವಕೀಲರ ಮೇಲೆ ಈ ರೀತಿ ದೌರ್ಜನ್ಯಎಸಗಿರುವ ಪಾಂಡವಪುರ ಉಪವಿಭಾಗಾಧಿಕಾರಿ ಸಾಮಾನ್ಯ ಜನತೆ ಮತ್ತು ರೈತರ ಜೊತೆ ಯಾವ ರೀತಿ ವರ್ತಿಸಬಹುದು ಎಂಬುದನ್ನು ಊಹಿಸಲು ಸಹ ಅಸಾಧ್ಯವಾಗಿದೆ. ಆದ್ದರಿಂದ ಉಪವಿಭಾಗಾಧಿಕಾರಿ ಕೆ ಆರ್ ಶ್ರೀನಿವಾಸ್ ರನ್ನ ಸೇವೆಯಿಂದ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಪ್ರಕರಣ ಕುರಿತಂತೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ಉಪವಿಭಾಗಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ವಕೀಲರಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ವಕೀಲರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ವಕೀಲರ ಸಂಘದ ಅಧ್ಯಕ್ಷ ಎಂ ಟಿ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಡಿ ಎಂ ಮಹೇಶ ನೇತೃತ್ವ ವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments